“ರತ್ನಾಕರಾಧೌತಪದಾಂ ಹಿಮಾಲಯ ಕಿರೀಟಿನೀಂ|
ಬ್ರಹ್ಮರಾಜರ್ಷಿ ರತ್ನಾಢ್ಯಾಂ ವಂದೇ ಭಾರತಮಾತರಂ||”
ಎಂಬಂತೆ ಸಂಪದ್ಭರಿತವಾದ ದೇಶ ನಮ್ಮ ಭಾರತ. ಇದನ್ನು ಲೂಟಿ ಮಾಡಲೆಂದೇ ಬಂದ ಬ್ರಿಟೀಷರು ನಂತರ ನಮ್ಮ ದೇಶದಲ್ಲಿಯೇ ನೂರಾರು ವರ್ಷಗಳ ಕಾಲ ದಬ್ಬಾಳಿಕೆ ನಡೆಸಿದರು. ಇವರಿಂದ ಭಾರತವನ್ನು ಮುಕ್ತಗೊಳಿಸಲು ಹೋರಾಡಿದವರು ಲಕ್ಷಾಂತರ ಮಂದಿ. ಅಂತಹವರ ಸ್ಮರಣೆ ಸ್ವಾತಂತ್ರ್ಯ ದಿನಾಚರಣೆಯಂದು ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ.
ಉದ್ಧಮ್ ಸಿಂಗ್ ರವರ ಜನನ 1899ರ ಡಿಸೆಂಬರ್ 26ರಂದು ಪಂಜಾಬಿನ ಸಂಗ್ರೂರ್ ಜಿಲ್ಲೆಯ ಸುನಮ್ ಎಂಬ ಗ್ರಾಮದಲ್ಲಿ ಒಂದು ಸಿಖ್ ಕುಟುಂಬದಲ್ಲಾಯಿತು. ಇವರ ತಂದೆ ಸರ್ದಾರ್ ತೆಹಲ್ ಸಿಂಗ್ ರೈಲ್ವೆ ಇಲಾಖೆಯಲ್ಲಿ ಕಾವಲುಗಾರರಾಗಿದ್ದರು. ಉದ್ಧಮ್ ಸಿಂಗ್ ರವರು ಭಾರತದ ಮೂರು ಪ್ರಮುಖ ಜನಾಂಗಗಳಾದ ಹಿಂದೂ, ಮುಸಲ್ಮಾನ್ ಹಾಗೂ ಸಿಖ್ಖರ ಏಕತೆಯನ್ನು ಸಾರಲು ತಮ್ಮ ಹೆಸರನ್ನು ರಾಮ್ ಮೊಹಮದ್ ಸಿಂಗ್ ಅಜಾದ್ ಎಂದು ಬಡಳಿಸಿಕೊಂಡರು. ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಯುವ ಶಕ್ತಿ ಎಂದೇ ಹೆಸರಾಗಿದ್ದ ಚಂದ್ರಶೇಖರ್ ಅಜಾದ್, ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ದೇವ್ ರವರ ಗುಂಪಿನಲ್ಲಿದ್ದ ಅನೇಕ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. 'ನಿದ್ರಿಸುತ್ತಿದ್ದ ಯುವಕರು ಬ್ರಿಟೀಷರ ವಿರುದ್ಧ ಯುದ್ಧಕ್ಕೆ ನಿಂತರೆ ಮಾತ್ರ ಭಾರತವು ಸ್ವತಂತ್ರ್ಯವಾಗುತ್ತದೆ' ಎಂದು ಈ ಗುಂಪು ನಂಬಿತ್ತು. ಬ್ರಿಟೀಷರು ಈ ಗುಂಪಿಗೆ "ಭಾರತದ ಆರಂಭಿಕ ಮಾರ್ಕ್ಸ್ವಾದಿಗಳು" ಎಂಬ ಹಣೆಪಟ್ಟಿ ನೀಡಿದರು, ಆದರೆ ಈ ಗುಂಪು ಬ್ರಿಟೀಷರ ಗ್ರಹಿಕೆಗೆ ವಿರುದ್ಧವಾಗಿ ಸಾಮಾನ್ಯ ಜನರಿಗೆ ಯಾವುದೇ ಹಾನಿಯುಂಟುಮಾಡದೆ ಕೇವಲ ಬ್ರಿಟೀಷ್ ಆಡಳಿತಗಾರರನ್ನು ಸದೆಬಡಿಯುವ ಗುರಿಯನ್ನು ಮಾತ್ರ ಹೊಂದಿತ್ತು.
1924ರಲ್ಲಿ ಸಿಂಗ್ ರವರು ಅಮೆರಿಕಾಗೆ ತೆರಳಿ ಅಲ್ಲಿ ಸೋಹನ್ ಸಿಂಗ್ ಭಾಕ್ನಾರವರಿಂದ ಸ್ಥಾಪಿತವಾಗಿದ್ದ ಘದರ್ ಪಾರ್ಟಿಯಲ್ಲಿ 3 ವರ್ಷಗಳ ಕಾಲ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿದರು.ನಂತರ 1927 ಆಗಸ್ಟ್ 30 ರಂದು ಕೆಲವು ಪರವಾನುರಹಿತ ಪಿಸ್ತೂಲು ಹಾಗೂ ಮದ್ದು ಗುಂಡುಗಳನ್ನು ಹೊಂದ್ದಿದ್ದಕ್ಕಾಗಿ ಸಿಂಗ್ ರವರನ್ನು ಬಂಧಿಸಲಾಯಿತು.
ಐದು ವರ್ಷಗಳ ಕಠಿಣ ಶಿಕ್ಷೆಯ ನಂತರ, 1931 ಅಕ್ಟೋಬರ್ 23 ರಂದು ಬಿಡುಗಡೆಯಾದ ಸಿಂಗ್ ರವರು ತಮ್ಮ ತವರೂರಾದ ಸುನಮ್ ಗೆ ತೆರಳಿ ಮೂರು ವರ್ಷಗಳ ಕಾಲ ಲಂಡನ್ ತಲುಪಲು ಹೊಂಚುಹಾಕಿ, 1933ರಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಕಾಶ್ಮೀರವನ್ನು ಸೇರಿ ಅಲ್ಲಿಂದ ಜರ್ಮನಿ, ಇಟಲಿ, ಫ್ರಾನ್ಸ್, ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳ ಮಾರ್ಗವಾಗಿ ಲಂಡನ್ ತಲುಪಿದರು. 1919ರಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ದ್ವೇಷವನ್ನು ತೀರಿಸಿಕೊಳ್ಳಲು ಪಂಜಾಬಿನ ಪ್ರಾಂತ್ಯದ ಅಂದಿನ ರಾಜ್ಯಪಾಲರಾಗಿದ್ದ ಮೈಕಲ್ ಓ ಡ್ವೇರ್ ನನ್ನು 21 ವರ್ಷಗಳ ನಂತರ, 1940 ಮಾರ್ಚ್ 13ರಂದು ಹತ್ಯೆಗೈಯುವ ಸಂಚನ್ನು ಮಾಡಿ ಕ್ಯಾಕ್ಸ್ಟನ್ ಹಾಲ್ ನಲ್ಲಿ ನಡೆಯುತ್ತಿದ್ದ ಈಸ್ಟ್ ಇಂಡಿಯಾ ಅಸೋಸಿಯೇಶನ್ ಹಾಗೂ ರಾಯಲ್ ಸೆಂಟ್ರಲ್ ಏಷ್ಯನ್ ಸೊಸೈಟಿಯ ಸಭೆಯೊಳಗೆ ಸಿಂಗ್ ರವರು ಪಿಸ್ತೂಲನ್ನು ಇಡಲೆಂದೇ ತಯಾರಿಸಿದ್ದ ಪುಸ್ತಕವನ್ನು ಹಿಡಿದು ಒಳನುಗ್ಗಿದರು. ಜನರನ್ನು ಉದ್ದೇಶಿಸಿ ಮಾತನಾಡಲು ಹೋಗುತ್ತಿದ್ದ ಮೈಕಲ್ ಓ ಡ್ವೇರ್ ನನ್ನು ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಂದರು. ಇಷ್ಟಕ್ಕೆ ಸುಮ್ಮನಾಗದ ಸಿಂಗ್ ರವರು ಸರ್ ಲೂಯಿಸ್ ಡೇನ್ ಲಾರ್ಡ್ ಲ್ಯಾಮಿಂಗ್ಟನ್ ರವರುಗಳ ಮೇಲೂ ಗುಂಡು ಹಾರಿಸಿ ತಪ್ಪಿಸಿಕೊಳ್ಳದೆ ಪೊಲೀಸರಿಗೆ ಶರಣಾದರು.
ತುಂಬಿದ ಸಭೆಗೆ ಒಬ್ಬರೇ ನುಗ್ಗಿ ಮೈಕಲ್ ಓ ಡ್ವೇರ್ ನನ್ನು ಸಿಂಗ್ ರವರು ಹತ್ಯೆ ಮಾಡಿದ ವಿಷಯ ಗಮನಾರ್ಹವಾದುದು. ಈಗಲೂ ಸ್ಕ್ವಾಟ್ಲೆಂಡ್ನ ನ ಬ್ಲ್ಯಾಕ್ ಮ್ಯೂಸಿಯಂನಲ್ಲಿ ಸಿಂಗ್ ರವರು ಉಪಯೋಗಿಸಿದ ಪಿಸ್ತೂಲು, ಕತ್ತಿ, ಡೈರಿ ಮತ್ತು ಮೈಕಲ್ ಓ ಡ್ವೇರ್ ಗೆ ಹಾರಿಸಿದ ಗುಂಡನ್ನು ಇಡಲಾಗಿದೆ. ಈ ಹತ್ಯಾಕಾಂಡದ ವಿಷಯವಾಗಿ ಭಾರತದಲಿ.ಪರ ಮತ್ತು ವಿರುದ್ಧವಾದ ವಾದಗಳು ಬಂದವು . ಇತಿಹಾಸಕಾರರ ಪ್ರಕಾರ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಲು ಇದೇ ಮೊದಲ ಮೆಟ್ಟಿಲು ಎಂದು ಹೇಳಲಾಗಿದೆ. 1940 ಏಪ್ರಿಲ್ 1 ರಂದು ಔಪಚಾರಿಕವಾಗಿ ಸಿಂಗ್ ರವರ ಮೇಲೆ ಮೈಕಲ್ ಓ ಡ್ವೇರ್ ನ ಹತ್ಯೆಯ ಆರೋಪವನ್ನು ಹೊರಿಸಲಾಯಿತು. ಸಿಂಗ್ ರವರನ್ನು ವಿಚಾರಣೆಗೆಂದು ಬ್ರಿಕ್ಸ್ಟನ್ ಜೈಲಿನಲ್ಲಿಟ್ಟಿದ್ದಾಗ 42 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು. ನಂತರ 1940 ಜೂನ್ 4 ರಂದು ಸೆಂಟ್ರಲ್ ಕ್ರಿಮಿನಲ್ ಕೋರ್ಟ್ ನಲ್ಲಿ ನ್ಯಾಯಮೂರ್ತಿ Atkinson ರವರ ಮುಂದೆ ಸಿಂಗ್ ರವರನ್ನು ಹಾಜರು ಪಡಿಸಲಾಯಿತು. ಈ ಹತ್ಯಾಕಾಂಡದ ಕಾರಣವನ್ನು ಕೇಳಿದಾಗ ಸಿಂಗ್ ರವರು "ನನಗೆ ಅವನ ಮೇಲೆ ದ್ವೇಷವಿತ್ತು ಹಾಗೂ ಅವನು ಈ ಶಿಕ್ಷೆಗೆ ಅರ್ಹ" ಎಂದು ಹೇಳಿದರು. ನ್ಯಾಯಮೂರ್ತಿ Atkinson , ಉದ್ಧಮ್ ಸಿಂಗ್ ರವರಿಗೆ ಗಲ್ಲು ಶಿಕ್ಷೆ ಆಗಬೇಕೆಂಬ ತೀರ್ಪನ್ನು ನೀಡಿದರು. 1940 ಜುಲೈ 31 ರಂದು ಪೆಂಟನ್ ವಿಲ್ ಕಾರಾಗೃಹದಲ್ಲಿ ಉದ್ಧಮ್ ಸಿಂಗ್ ರವರನ್ನು ನೇಣಿಗೆ ಹಾಕಲಾಯಿತು. ಇಂತಹ ಶೂರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ನಾವು ಇಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ.
ಇಂತಹ ಮಹಾನ್ ಹೊರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.