“ದೇಶಕ್ಕಾಗಿ ನೂರು ಬಾರಿ ಪ್ರಾಣಾರ್ಪಣೆ ಮಾಡುವ ಸಂದರ್ಭ ಒದಗಿದರೂ ನಾನು ಅಂಜುವುದಿಲ್ಲ ದೇವರೇ, ಬದಲಾಗಿ ಇನ್ನೂ ಸಾವಿರ ಬಾರಿ ಭಾರತದಲ್ಲೇ ಹುಟ್ಟಿ ಭಾರತಾಂಬೆಯ ರಕ್ಷಣೆ ಮಾಡುವಂತಹ ವರವನ್ನು ಕೊಡು.”
-ರಾಮ್ ಪ್ರಸಾದ್ ಬಿಸ್ಮಿಲ್
ರಾಮ್ ಪ್ರಸಾದ್ ಬಿಸ್ಮಿಲ್‍ರವರ ಜನನ 1897ರ ಜೂನ್ 11ರಂದು ಉತ್ತರ ಪ್ರದೇಶದ ಶಹಜಹಾನ್‍ಪುರದ ಒಂದು ಹಿಂದೂ ಕುಟುಂಬದಲ್ಲಾಯಿತು. ಇವರ ತಾಯಿ ಮೂಲಮತಿ ಹಾಗೂ ತಂದೆ ಮುರಳೀಧರ. ಬಿಸ್ಮಿಲ್‍ರವರು ಏಳು ವರ್ಷದ ಹುಡುಗನಾಗಿದ್ದಾಗ ಅವರ ತಂದೆಯ ಹತ್ತಿರವೇ ಹಿಂದಿ ಭಾಷೆಯನ್ನು ಕಲಿತರು. ನಾಲ್ಕನೇ ತರಗತಿಯನ್ನು ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ತೇರ್ಗಡೆ ಹೊಂದಿದ ಬಿಸ್ಮಿಲ್‍ರವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದರು. ಅಲ್ಲಿ ಓದುತ್ತಿರುವಾಗಲೇ ಪದ್ಯಗಳನ್ನು ‘ಬಿಸ್ಮಿಲ್’ ಎಂಬ ಅಂಕಿತನಾಮದಿಂದ ಬರೆಯಲು ಪ್ರಾರಂಭಿಸಿದರು.
ಬಿಸ್ಮಿಲ್ಲರ ದೈವ ಭಕ್ತಿಯನ್ನು ನೋಡಿದ ಮುನ್ಷಿ ಇಂದ್ರಜಿತ್‍ರವರು ಸಂಧ್ಯಾವಂದನೆಯನ್ನು ಹೇಳಿಕೊಟ್ಟಿದ್ದಲ್ಲದೇ ಆರ್ಯ ಸಮಾಜದ ಪರಿಚಯವನ್ನು ಮಾಡಿಕೊಟ್ಟು, ಸ್ವಾಮಿ ದಯಾನಂದ ಸರಸ ್ವತಿಯವರು ಬರೆದ “ಸತ್ಯಾರ್ಥ ಪ್ರಕಾಶ” ಎಂಬ ಪುಸ್ತಕವನ್ನು ಕೊಟ್ಟರು. ಈ ಪುಸ್ತಕವು ಬಿಸ್ಮಿಲ್‍ರವರ ಜೀವನ ಶೈಲಿಯನ್ನೇ ಬದಲಿಸಿತು.
ರಾಷ್ಟ್ರೀಯತವಾದಿ ಭಾಯಿ ಪರಮಾನಂದರನ್ನು ಬ್ರಿಟೀಷರು ಲಾಹೋರ್ ಪಿತೂರಿ ಪ್ರಕರಣದಲ್ಲಿ ಅಪರಾಧಿಯಂತೆ ಬಿಂಬಿಸಿ, ವಿಧಿಸಿದ್ದ ಗಲ್ಲು ಶಿಕ್ಷೆಯ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ ಬಿಸ್ಮಿಲ್‍ರವರು ತಮ್ಮ ಕೋಪವನ್ನು “ಹೇ ಮೇರಾ ಜನಮ್” ಎಂಬ ಪದ್ಯದ ರೂಪದಲ್ಲಿ ಹೊರಹಾಕಿದರು. ಈ ಪದ್ಯದಲ್ಲಿ ಬ್ರಿಟೀಷ್ ಸರ್ಕಾರವನ್ನು ಬುಡಸಮೇತ ಕಿತ್ತೆಸೆಯುವಂತಹ ಆಕ್ರೋಶ ತುಂಬಿತ್ತು. ಇದು ಇವರ ಹೋರಾಟದ ಮೊದಲ ಮೆಟ್ಟಿಲು ಎಂದು ಹೇಳಬಹುದು.
ತಮ್ಮ ಗುಂಪಿನ ಕೆಲಸಗಳಿಗೆ ಹಣ ಸಂಗ್ರಹಿಸಲು 1918ರ ಜನವರಿ 28ರಂದು “ಎ ಮೆಸೇಜ್ ಟು ಕಂಟ್ರಿಮೆನ್” ಎಂಬ ಕರಪತ್ರವನ್ನು ಹೊರಡಿಸಿ, ಬಂದ ಹಣದಿಂದ ಬ್ರಿಟೀಷರನ್ನು ಲೂಟಿ ಮಾಡಲು ಅಗತ್ಯವಾದ ಶಸ್ತ್ರಗಳನ್ನು ಸಂಗ್ರಹಿಸಿದರು. ಈ ವಿಷಯ ತಿಳಿದ ಬ್ರಿಟೀಷರು ಬಿಸ್ಮಿಲ್‍ರವರನ್ನು ಬಂಧಿಸಲು ಹೋದಾಗ ಯಮುನಾ ನದಿಗೆ ಹಾರಿ ತಪ್ಪಿಸಿಕೊಂಡು ಒಂದು ವರ್ಷ ನೆಲಮಾಳಿಗೆಯಲ್ಲೇ ಅಡಗಿದ್ದ ಇವರು ‘ಮನ್ ಕಿ ಲೆಹರ್’, ‘ಯೋಗಿಕ್ ಸದನ್’, ‘ಸ್ವದಿಂತಾ ಕಿ ದೇವಿ’ ಮತ್ತು ‘ಸರ್ಫಾರೋಷಿ ಕಿ ತಮನಾನಾ’ ಎಂಬ ಪುಸ್ತಕಗಳನ್ನು ಬರೆದರು.
1922ರಲ್ಲಿ ನಡೆದ ಚೌರಾ ಚೌರಿ ಹತ್ಯಾಕಾಂಡದಿಂದ ಮನನೊಂದು ಪ್ರೇರೇಪಿತರಾದ ಬಿಸ್ಮಿಲ್ ರವರು 1924ರ ಫೆಬ್ರವರಿ ತಿಂಗಳಲ್ಲಿ ಸಚೀಂದ್ರನಾಥ್ ಸಾನ್ಯಲ್ ಮತ್ತು ಯೋಗೇಶ್ ಚಂದ್ರ ಚಟರ್ಜಿರವರೊಂದಿಗೆ ಸೇರಿ “ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್” (ಹೆಚ್.ಆರ್.ಎ) ಎಂಬ ಸಂಸ್ಥೆಯನ್ನು ಸ್ಥಾಪಿಸಿದರು.
ಬ್ರಿಟೀಷರ ವಿರುದ್ಧ ನಿರ್ಣಾಯಕ ಹೋರಾಟವನ್ನು ಸಂಘಟಿಸಲು ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್‍ನ ಮೂಲಕ 1925ರ ಆಗಸ್ಟ್ 9ರಂದು ಬ್ರಿಟೀಷರ ಖಜಾನೆಯನ್ನು ಹೊತ್ತು ಶಹಜಹಾನ್ ಪುರದಿಂದ ಲಖನೌಗೆ ತೆರಳುತ್ತಿದ್ದ ರೈಲನ್ನು ಕಾಕೋರಿಯಲ್ಲಿ ತಡೆದು ಲೂಟಿ ಮಾಡುವ ಸುಸಜ್ಜಿತ ¸ ಸಂಚನ್ನು ಬಿಸ್ಮಿಲ್ಲರು ರೂಪಿಸಿದರು. ನಂತರ ಬಿಸ್ಮಿಲ್ಲರ ನೇತೃತ್ವದಲ್ಲಿ ಚಂದ್ರಶೇಖರ್ ಆಜಾದ್, ಅಶ್ರಫುಲ್ಲಾ ಖಾನ್, ಬನ್ವಾರಿ ಲಾಲ್‍ರಂತಹ ಕ್ರಾಂತಿಕಾರಿಗಳನ್ನೊಳಗೊಂಡ ಹತ್ತು ಜನರ ತಂಡವು ಈ ಸಂಚನ್ನು ಸಾಧಿಸಿತು. ಈ ‘ಕಾಕೋರಿ ಲೂಟಿ’ಯಿಂದ ಜರ್ಝರಿತವಾದ ಬ್ರಿಟೀಷ್ ಸರ್ಕಾರವು ಒಂದು ತಿಂಗಳ ಸುದೀರ್ಘ ತನಿಖೆಯನ್ನು ನಡೆಸಿ ಬಿಸ್ಮಿಲ್,ಅಶ್ರಫುಲ್ಲಾ ಖಾನ್,ರೋಷನ್ ಸಿಂಗ್ ಮತ್ತು ರಾಜೇಂದ್ರನಾಥ್ ಲಹಿರಿಯವರುಗಳನ್ನು ಹಿಡಿಯುವಲ್ಲಿ ಯಶಸ್ವಿಯಾಯಿತು.
ಕಾಕೋರಿ ಲೂಟಿ ಪ್ರಕರಣದ ವಿಶೇಷ ನ್ಯಾಯಮೂರ್ತಿಯಾಗಿದ್ದ ಜೆ.ಆರ್.ಡಬ್ಲ್ಯೂ. ವ್ಯೂನಾಟ್‍ರವರು 1927 ಸೆಪ್ಟೆಂಬರ್ 16ರಂದು ಇಂಡಿಯನ್ ಪೀನಲ್ ಕೋಡಿನ ಸೆಕ್ಷನ್ 121(A),120(B), 302 ಮತ್ತು 396ರ ಅಡಿಯಲ್ಲಿ ಇಡೀ ಪ್ರಕರಣದ ಪ್ರಮುಖ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ರಫುಲ್ಲಾ ಖಾನ್,ರೋಷನ್ ಸಿಂಗ್ ಮತ್ತು ರಾಜೇಂದ್ರನಾಥ್ ಲಹಿರಿಯವರುಗಳನ್ನು ನೇಣಿಗೇರಿಸುವಂತೆ ತೀರ್ಪನ್ನು ನೀಡಿದರು. ನ್ಯಾಯಾಲಯದ ಆದೇಶದಂತೆ 1927 ಡಿಸೆಂಬರ್ 19ರಂದು ಗೋರಕ್‍ಪುರದ ಜೈಲಿನಲ್ಲಿ ಬಿಸ್ಮಿಲ್‍ರವರನ್ನು ನೇಣಿಗೇರಿಸಲಾಯಿತು.
ಇಂತಹ ಮಹಾನ್ ಹೊರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.