ತಾತ್ಯ ಟೋಪೆರವರ ಜನ್ಮ 1814ರಲ್ಲಿ ಈಗಿನ ಮಹಾರಾಷ್ಟ್ರರಾಜ್ಯದ ನಾಸಿಕ್ ಜಿಲ್ಲೆಗೆ ನಿಕಟವಾಗಿರುವ ಪಟೌದಾ ಜಿಲ್ಲೆಯ ಯೇವ್ಲಾ ಗ್ರಾಮದಲ್ಲಿ ಒಂದು ಬ್ರಾಹ್ಮಣ ಪರಿವಾರದಲ್ಲಾಯಿತು. ಅವರ ತಾಯಿ ರುಕ್ಮಾಬಾಯಿ ಹಾಗೂ ತಂದೆ ಪಾಂಡುರಂಗ ಪಂತ್. ಪಾಂಡುರಂಗ ಪಂತ್ ಅವರು ಶಾಸ್ತ್ರೋಕ್ತ ವಿಚಾರಗಳನ್ನೆಲ್ಲಾ ತಿಳಿದಿದ್ದ ವಿದ್ವಾಂಸರಾಗಿದ್ದರು. ತಾತ್ಯ ಟೋಪೆರವರು ಪಾಂಡುರಂಗ ಪಂತರ ಜ್ಯೇಷ್ಠ ಪುತ್ರರಾಗಿದ್ದರು ಹಾಗೂ ಅವರ ನಿಜವಾದ ನಾಮಧೇಯ ರಾಮಚಂದ್ರ ಪಾಂಡುರಂಗ ಯೇವಲ್ಕರ್ ಎಂಬುದಾಗಿತ್ತು, ನಂತರ ಪಾಂಡುರಂಗ ಪಂತರು ಪೇಶ್ವಾಗಳ ರಾಜಧಾನಿಯಾಗಿದ್ದ ಪೂನಾಗೆ ತೆರಳಿ ಅವರಿಗೆ ಪರಿಚಯವಿದ್ದ ಹಾಗೂ ಪೇಶ್ವಾ ದರಬಾರಿನಲ್ಲಿ ಅಧಿಕಾರಿಗಳಾಗಿದ್ದ ಶ್ರೀ ತ್ರ್ಯಂಬಕ್‍ಜೀ ದೆಂಗಲೆರವರ ಸಹಾಯದಿಂದ ಪೇಶ್ವಾಅರಮನೆಯಲ್ಲಿನಿರ್ಮಿಸಿದ್ದ ಯಜ್ಞಶಾಲೆಹಾಗೂ ಧಾರ್ಮಿಕ ವಿಭಾಗದ ಅಧ್ಯಕ್ಷರಾದರು.
ಟೋಪೆರವರು ತಮ್ಮ ಬಾಲ್ಯದಲ್ಲಿ ಸಮಯ ಸಿಕ್ಕಾಗಲೆಲ್ಲಾ ಪೇಶ್ವಾ ದರಬಾರಿಗೆ ಹೋಗುತ್ತಿದ್ದರು. ಅಲ್ಲಿನ ದೊರೆಯಾದ ಪೇಶ್ವಾ ಬಾಜೀರಾವ್, ತಾತ್ಯರವರನ್ನು ನೋಡಿ ಪ್ರಭಾವಿತನಾದ ಕಾರಣ ಟೋಪೆರವರು ಪೇಶ್ವಾ ಬಾಜೀರಾವ್‍ನ ದತ್ತು ಪುತ್ರರಾದ ನಾನಾ ಸಾಹೇಬ್, ಬಾಲಾ ಸಾಹೇಬ್ ಹಾಗೂ ಬಾಬಾ ಭಟ್‍ರ ಜೊತೆಗೆ ಸ್ನೇಹ ಬೆಳೆಸುವದಷ್ಟೇ ಅಲ್ಲದೇ ಅವರೊಂದಿಗೇ ಶಿಕ್ಷಣ ಪಡೆಯುವಂತಾಯಿತು. ಹಾಗಾಗಿ ತಾತ್ಯ ಟೋಪೆರವರು ಬಾಜೀರಾವ್‍ನ ಮಕ್ಕಳೊಂದಿಗೇ ಶಾಸ್ತ್ರ ವಿದ್ಯೆ, ಶಸ್ತ್ರ ವಿದ್ಯೆ, ಕುದುರೆ ಸವಾರಿ ಮುಂತಾದವುಗಳೆಲ್ಲವನ್ನೂ ಕಲಿತರು.
ತಾತ್ಯ ಟೋಪೆಯವರ ಒಂದು ವೀರೋದ್ಧಾತ್ತ ಕಾರ್ಯವನ್ನು ನೋಡಿ ಖುಷಿಗೊಂಡು ಪೇಶ್ವಾ ಬಾಜೀರಾವ್‍ರವರು ತಾತ್ಯರವರಿಗೆ ಒಂದು ಅತ್ಯಂತ ಅಮೂಲ್ಯವಾದ ಟೋಪಿಯನ್ನು ಪುರಸ್ಕಾರವಾಗಿ ನೀಡಿದರು. ಈ ಟೋಪಿ ಒಂಭತ್ತು ವಜ್ರಗಳು ಹಾಗೂ ಇನ್ನೂ ಅನೇಕ ಅಮೂಲ್ಯವಾದ ರತ್ನಗಳಿಂದ ಕೂಡಿದ್ದು, ಈ ಟೋಪಿಯನ್ನು ತಾತ್ಯರವರು ತಮ್ಮ ಅಂತ್ಯದವರೆಗೂ ಅವರೊಂದಿಗೇ ಇಟ್ಟುಕೊಂಡಿದ್ದರು. ಆದ್ದರಿಂದ ಅವರಿಗೆ ತಾತ್ಯ ಟೋಪೆ ಎಂಬ ಉಪನಾಮ ಲಭಿಸಿತು.
"ತಾತ್ಯ" ಎಂದರೆ ಮರಾಠಿ ಭಾಷೆಯಲ್ಲಿ ಸ್ನೇಹ ಅಥವಾ ಅನುರಾಗ ಎಂದರ್ಥ. ಟೋಪೆ ಎಂಬ ಶಬ್ಧ ಟೋಪಿ ಪದದ ಬದಲೀ ರೂಪವಷ್ಟೇ.
ಎರಡನೇ ಪೇಶ್ವಾ ಬಾಜೀರಾವ್‍ನ ಮರಣದ ನಂತರ ಅವನ ದತ್ತು ಪುತ್ರನಾದ ನಾನಾ ಸಾಹೇಬ್ ರಾಜನಾದನು. 1851ರಲ್ಲಿ ಲಾರ್ಡ್ ಡಲ್‍ಹೌಸೀ ಪೇಶ್ವಾ ರಾಜ್ಯಕ್ಕೆ ಕೊಡುತ್ತಿದ್ದ ಪಿಂಚಣಿಗೂ ಸಹ ಕಡಿವಾಣ ಹಾಕಿದನು. ಇದು ಟೋಪೆಯವರನ್ನು ಕೆರಳಿಸಿತು. ಟೋಪೆರವರಿಗೆ ಅಂದಿನಿಂದ ಬ್ರಿಟಿಷರು ಕಟ್ಟಾ ವೈರಿಗಳಾದರು. 1857ರ ಭಾರತದ ಮಹಾ ಸ್ವಾತಂತ್ರ್ಯ ಸಂಗ್ರಾಮವು ತೀವ್ರಗೊಂಡಿದ್ದ ಕಾಲವದು. ಆ ಸಮಯದಲ್ಲಿಯೇ ಕಾನ್ಪುರದಲ್ಲಿ ಬೀಡು ಬಿಟ್ಟಿದ್ದ ಬ್ರಿಟಿಷರ ವಿರುದ್ಧ ಹೋರಾಡಿ ಟೋಪೆಯವರು ಜಯ ಸಾಧಿಸಿದರು. ಆ ಜಾಗಗಳಲ್ಲಿ ನಾನಾ ಸಾಹೇಬ್‍ನ ಅಧಿಪತ್ಯವನ್ನು ಸ್ಥಾಪಿಸಿ ಅವನ ಸೈನ್ಯದ ಸೇನಾಧಿಪತಿಯಾದರು. ನಾನಾ ಸಾಹೇಬ್‍ರ ಸೈನ್ಯ ಜೂನ್ 1857ರಲ್ಲಿ ಬ್ರಿಟಿಷ್ ರಕ್ಷಣಾ ಸೈನ್ಯಕ್ಕೆ ಮುತ್ತಿಗೆ ಹಾಕಿತು. ಟೋಪೆರವರ ಮುಂದಾಳತ್ವದಲ್ಲಿ ನಡೆದ ನಿರಂತರ ಬಾಂಬ್ ಸ್ಫೋಟಗಳು ಹಾಗೂ ಇನ್ನಿತರ ದಾಳಿಗಳಿಂದಾಗಿ ಜನರಲ್ ವೀಲರ್‍ನ ತುಕಡಿಯು ಭಾರಿ ನಷ್ಟವನ್ನು ಅನುಭವಿಸಿತು. ಜನರಲ್ ವೀಲರ್ ತನ್ನ ಸೋಲನ್ನೊಪ್ಪಿಕೊಂಡು ಅದಕ್ಕೆ ಪ್ರತಿಯಾಗಿ ಅಲಹಾಬಾದ್‍ಗೆ ತನ್ನ ಪರಿವಾರದ ಕ್ಷೇಮ ಪ್ರಯಾಣದ ಬೇಡಿಕೆಯಿಟ್ಟನು. ಅದಕ್ಕೆ ನಾನಾ ಸಾಹೇಬ್‍ನೂ ಸಹ ಒಪ್ಪಿಕೊಂಡನು, ಆದರೂ ಯಾವುದೋ ಒಂದು ತಪ್ಪು ತಿಳುವಳಿಕೆಯಿಂದಾಗಿ ನಾನಾ ಸಾಹೇಬ್‍ನ ಸೈನ್ಯವು ವಾಪಸ್ ತೆರಳುತ್ತಿದ್ದ ಬ್ರಿಟಿಷ್ ಸೈನ್ಯದ ಮೇಲೆ ದಾಳಿ ಮಾಡಿತು. ಈ ವೇಳೆ ಬ್ರಿಟಿಷ್ ಪರಿವಾರದ ಅನೇಕ ಮಹಿಳೆಯರು ಹಾಗೂ ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲಾಯಿತು. ಈ ವಿಷಯ ತಿಳಿದ ಬ್ರಿಟಿಷರು ಇದಕ್ಕೆ ಪ್ರತಿಯಾಗಿ ಹ್ಯಾವ್‍ಲಾಕ್ ಹಾಗೂ ನೀಲ್ ಎಂಬುವವರ ಮುಂದಾಳತ್ವದಲ್ಲಿ ಕಾನ್ಪೂರದ ಕಡೆಗೆ ಹೊರಟು ಭಾರತೀಯ ಗ್ರಾಮಸ್ಥರ ಮೇಲೆ ಹಲ್ಲೆಯೆಸಗಲು ಶುರು ಮಾಡಿದರು. ಈ ನಡುವೆ ಟೋಪೆಹಾಗೂ ಸೈನ್ಯದ ಮತ್ತೊಬ್ಬ ಮುಖ್ಯಸ್ಥನಾದ ಅಜೀóಮುಲ್ಲಾ ಖಾನ್ ಎಂಬುವವರ ನಡುವೆ ಒತ್ತೆಯಾಳುಗಳ ವಿಷಯದ ಬಗ್ಗೆ ಆಂತರಿಕ ಕಲಹವೇರ್ಪಟ್ಟು ಟೋಪೆರವರ ಮಾತನ್ನು ತಿರಸ್ಕರಿಸಿದ ಅಜೀóಮುಲ್ಲಾ ಖಾನ್ ಒತ್ತೆಯಾಳಾಗಿದ್ದ ಅನೇಕ ಮಹಿಳೆಯರು ಹಾಗೂ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಕೊಂದನು. ಇದರ ಪ್ರತಿಫಲವಾಗಿ ಬ್ರಿಟಿಷರು ತಮ್ಮ ಪ್ರತಿದಾಳಿಯನ್ನು ತೀವ್ರಗೊಳಿಸಿದರು. ಈ ಎಲ್ಲಾ ಕಾರಣಗಳಿಂದಾಗಿ ನಾನಾ ಸಾಹೇಬ್ ‘ಗ್ವಾಲಿಯರ್’ ಪ್ರದೇಶವನ್ನು ಕಳೆದುಕೊಳ್ಳಬೇಕಾಯಿತು. ಇಲ್ಲಿ ಒಂದು ವಿಷಯ ಗಮನಿಸಬೇಕು, ನಾನಾ ಸಾಹೇಬ್‍ನ ಕಡೆಯವರು ಟೋಪೆಯವರ ಮಾತನ್ನು ಕೇಳಿ ಎಚ್ಚರದಿಂದ ನಡೆದಿದ್ದರೆ ತಮ್ಮ ಗೆಲುವನ್ನು ಸಾರ್ಥಕಗೊಳಿಸಿಕೊಂಡು ಮುನ್ನಡೆಯಬಹುದಿತ್ತು, ಭಾರತ ಅಷ್ಟು ವರ್ಷಗಳ ಕಾಲ ಬ್ರಿಟಿಷರಿಂದ ನರಳಲು ಇದೂ ಒಂದು ಕಾರಣವೆನ್ನಬಹುದು.
ತಾತ್ಯ ಟೋಪೆರವರು ಇದರಿಂದ ಧೃತಿಗೆಡದೆ ಸಾಗರ್, ನರ್ಮದಾ, ಖಾನ್‍ದೇಶ್ ಹಾಗೂ ರಾಜಸ್ಥಾನ ಪ್ರದೇಶಗಳಲ್ಲಿಗೆರಿಲ್ಲಾಯುದ್ಧಗಳನ್ನು ಮಾಡಿದರು. ಸರಿಸುಮಾರು ಒಂದು ವರ್ಷಗಳ ಕಾಲ ಬ್ರಿಟಿಷರಿಂದ ಟೋಪೆರವರನ್ನು ಹಾಗೂ ಅವರ ಗೆರಿಲ್ಲಾ ಯುದ್ಧಗಳನ್ನು ಹಿಮ್ಮೆಟ್ಟಲು ಸಾಧ್ಯವಾಗಲಿಲ್ಲ. ಎಷ್ಟು ಹುಡುಕಿದರೂ ಬ್ರಿಟಿಷರಿಗೆ ಸಿಗದ ಟೋಪೆರವರು ಕೊನೆಗೆ ಅವರ ಸ್ನೇಹಿತ ಮಾನ್ ಸಿಂಗ್ ಎಂಬಾತನ ಮೋಸದ ಸುಳಿಗೆ ಸಿಲುಕಿ ಬ್ರಿಟಿಷರಿಗೆ ಸೆರೆಯಾದರು. ಇವರ ಸೆರೆ ಮಧ್ಯ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅಂತ್ಯ ಎಂದೇ ಹೇಳಬಹುದು. ಅದಕ್ಕೆ ತಾತ್ಯ ಟೋಪೆರವರ ಹೆಸರು ಇಂದಿಗೂ ಉಳಿದಿದೆ. 1859ರ ಏಪ್ರಿಲ್ 18ರಂದು ಇವರನ್ನು ನೇಣಿಗೇರಿಸಲಾಯಿತು. ಆದರೆ ಕೆಲವರ ಪ್ರಕಾರ ತಾತ್ಯ ಟೋಪೆಯವರ ಸಾವು ಚಿಪಾ ಬರೋಡಾ ಯುದ್ದದಲ್ಲಿ ಬ್ರಿಟಿಷರೊಂದಿಗೆ ಸೆಣೆಸಾಡುತ್ತಿರುವಾಗಲೇ ಸಂಭವಿಸಿತು ಎಂದು ಹೇಳಲಾಗಿದೆ. ಇದು ಇನ್ನೂ ಕುತೂಹಲಕಾರಿಯಾಗಿಯೇ ಉಳಿದಿದೆ. ಇಂತಹ ಶೂರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ನಾವು ಇಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ಮಹಾನ್ ಹೋರಾಟಗಾರರನ್ನು ಕಂಡ ಭಾರತ ಮಾತೆಯೇ ಧನ್ಯ.