“ನನ್ನ ರಕ್ತದ ಸಾಮರ್ಥ್ಯವನ್ನು ಸಾಬೀತುಪಡಿಸುವ ಮುನ್ನ, ಸಾವು ನನ್ನೆದುರಿಗೆ ಬಂದರೆ ಆ ಸಾವನ್ನೂ ಕೊಂದುಬಿಡುತ್ತೇನೆ.”

-ಮೇಜರ್ ಮನೋಜ್ ಕುಮಾರ್ ಪಾಂಡೆ



    ಮೇಜರ್ ಮನೋಜ್‍ಕುಮಾರ್ ಪಾಂಡೆಯವರ ಜನನ 1975ರ ಜೂನ್ 25ರಂದು ಉತ್ತರಪ್ರದೇಶದ ಸೀತಾಪುರ ಎಂಬ ಗ್ರಾಮದಲ್ಲಾಯಿತು. ಇವರ ತಾಯಿ ಮೋಹಿನಿ ಪಾಂಡೆ, ತಂದೆ ಗೋಪಿಚಂದ್ ಪಾಂಡೆ. ಮನೋಜ್ ಕುಮಾರ್ ಪಾಂಡೆಯವರ ಪ್ರಾಥಮಿಕ ಶಿಕ್ಷಣ ಲಖನೌನ ಸೈನಿಕ್ ಶಾಲೆಯಲ್ಲಿ ಹಾಗೂ ಪ್ರೌಢಶಿಕ್ಷಣವು ರಾಣಿ ಲಕ್ಷ್ಮೀಬಾಯಿ ಮೆಮೋರಿಯಲ್ ಶಾಲೆಯಲ್ಲಾಯಿತು. ಅತ್ಯಂತ ಪ್ರತಿಭಾವಂತರು, ಬುದ್ಧಿವಂತರು ಆಗಿದ್ದ ಪಾಂಡೆಯವರು ಶಿಕ್ಷಣ ಹಾಗೂ ಕ್ರೀಡಾಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು, ಪ್ರಮಾಣಪತ್ರಗಳನ್ನು ಪಡೆದಿದ್ದರು. ಶಿಕ್ಷಣದ ನಂತರ ನ್ಯಾಷನಲ್ ಡಿಫೆನ್ಸ್ ಅಕಾಡಮಿಗೆ ಸೇರಲು ಹೋದಾಗ ಅಲ್ಲಿನ ಸಂದರ್ಶನಾಧಿಕಾರಿಯೊಬ್ಬರು ಇವರನ್ನು ಕುರಿತು-“ಇಷ್ಟೊಂದು ಪ್ರತಿಭಾವಂತನಾದ ನೀನು ಸೈನ್ಯಕ್ಕೆ ಸೇರಲು ಕಾರಣವೇನೆಂದು ಕೇಳಿದಾಗ” ಪಾಂಡೆಯವರು “ಬೇರೆ ಯಾವ ವೃತ್ತಿಯಲ್ಲೂ ಪರಮವೀರಚಕ್ರ ಸಿಗುವುದಿಲ್ಲಾ ಅದು ಸಿಗುವುದು ಕೇವಲ ಸೈನ್ಯದಲ್ಲಿ, ಆದ್ದರಿಂದ ನಾನು ಸೈನ್ಯಕ್ಕೆ ಸೇರಿ ಅದನ್ನು ಪಡೆಯಲು ಬಂದಿದ್ದೇನೆ” ಎಂದರು.

    ಡಿಫೆನ್ಸ್ ಅಕಾಡಮಿಯ ಪರೀಕ್ಷೆಗಳಲ್ಲಿಯೂ ಸಹ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಪಾಂಡೆಯವರನ್ನು ಮೈಕ್ ಸ್ಕ್ವಾರ್ಡನ್‍ನ್ನಿಂದ ಫಾರ್ವರ್ಡ್ ಪೋಸ್ಟ್‍ಗೆ ನೇಮಿಸಲಾಯಿತು. ಪ್ರಪಂಚದ ಅತಿ ಎತ್ತರದ ಯುದ್ಧಭೂಮಿ ಎಂದೇ ಹೆಸರಾಗಿರುವ ಸೈಷನ್ ಪರ್ವತದಲ್ಲಿ ಕಾರ್ಯನಿರ್ವಹಿಸಿದ ನಂತರ ಇವರು ಮತ್ತು ಇನ್ನಿತರ ಸೈನಿಕರು ಬಿಡಾರಗಳಿಗೆ ಹಿಂದಿರುಗುವ ಸಮಯದಲ್ಲಿ ಪಾಕಿಸ್ತಾನ ಸೈನ್ಯದ ಒಂದು ಗುಂಪು ಕಾರ್ಗಿಲ್‍ನ ಬೆಟ್ಟದ ಮೇಲೆ ಕಂಡುಬಂದಿತು. ಪಾಂಡೆಯವರ ಕಾರ್ಯವೈಖರಿಯನ್ನು ನೋಡಿದ್ದ ಕರ್ನಲ್ ಲಲಿತ್‍ರಾಯ್ ಹಾಗೂ ಸೈನ್ಯದ ವರಿಷ್ಟರು ಸಭೆ ಸೇರಿ ಪಾಕಿಸ್ತಾನಿ ಸೈನಿಕರನ್ನು ಸದೆ ಬಡಿದು ಕಾರ್ಗಿಲ್ ವಶಪಡಿಸಿಕೊಳ್ಳಲು ಪಾಂಡೆಯವರನ್ನು 1/11 ಗೋರ್ಕಾ ರೈಫಲ್ಸ್‍ನ ಮುಖ್ಯಸ್ಥರನ್ನಾಗಿ ಮಾಡಿ ಅವರ ಜೊತೆ ಕೆಲವು ಸೈನಿಕರನ್ನು ಕಳುಹಿಸಿದರು.

     1999ರ ಜುಲೈ 3ನೇ ತಾರೀಖಿನ ರಾತ್ರಿ ಪಾಂಡೆಯವರ ಮುಂದಾಳತ್ವದ ತಂಡವು ಖಲುಬರ್ ಪರ್ವತದ ತುದಿಯನ್ನು ತಲುಪಲು ಅತ್ಯಂತ ಕಠಿಣವಾದ ಮಾರ್ಗವನ್ನು ಹಿಡಿಯಬೇಕಾಯಿತು. ಶತ್ರುಗಳ ದಾಳಿ ವಿಪರೀತವಾದಾಗ ಪಾಂಡೆಯವರು ತಮ್ಮ ತಂಡವನ್ನು ಎರಡು ಭಾಗವಾಗಿ ವಿಂಗಡಿಸಿ ಒಂದನ್ನು ಪರ್ವತದ ಬಲಭಾಗದಿಂದ ಮತ್ತೊಂದನ್ನು ಎಡಭಾಗದಿಂದ ನುಗ್ಗುವಂತೆ ಆದೇಶಿಸಿ, ವೀರೋಚಿತವಾಗಿ ಹೋರಾಡಿದ ಪಾಂಡೆಯವರು ಬಂಕರ್‍ಗಳಲ್ಲಿದ್ದ ಪಾಕಿಸ್ತಾನಿಯರನ್ನು ಕೊಲ್ಲಲು ಪ್ರಾರಂಭಿಸಿದರು.

     ಆ ಸಮಯದಲ್ಲಿ ಶತ್ರುಗಳು ಹಾರಿಸಿದ ಗುಂಡೊಂದು ಪಾಂಡೆಯವರು ಬಲಗೈ ತೋಳಿಗೆ ತಗುಲಿತು. ಆದರೂ ಧೃತಿಗೆಡದ ಇವರು ಎಡಗೈನಿಂದಲೇ ಬಾಂಬುಗಳನ್ನು ಎಸೆದು ಪಾಕಿಸ್ತಾನಿಯರಿದ್ದ ಎರಡು ಬಂಕರ್‍ಗಳನ್ನು ನಾಶಪಡಿಸಿ ಮುಂದೆ ಸಾಗುವಾಗ ಮತಷ್ಟು ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಪಾಂಡೆಯವರು “ನ ಚೋಡ್ನೊ” ಯಾರನ್ನು ಬಿಡಬೇಡ ಎಂದು ತಮ್ಮ ತಂಡದವರಿಗೆ ಹೇಳುತ್ತಾಮತ್ತೊಂದು ಬಂಕರ್‍ನನ್ನು ನಾಶಪಡಿಸಿ, “ಈ ಗುಡ್ಡಈಗ ನಮ್ಮ ವಶವಾಗಿದೆ ಎಂದು ವರಿಷ್ಟರಿಗೆ ಹೇಳಿಬಿಡಿ” ಎಂದು ಹೇಳುತ್ತಾತಾಯಿ ಭಾರತಿಯ ಮಡಲಿಗೆ ಇವರ ಪ್ರಾಣವನ್ನು ಸಮರ್ಪಿಸಿದರು.

     ವೀರ ಯೋಧ ಪಾಂಡೆಯವರಿಗೆ 52ನೇ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳು ಮರಣೋತ್ತರ ಪ್ರಶಸ್ತಿಯಾಗಿ “ಪರಮವೀರಚಕ್ರ” ಪ್ರಶಸ್ತಿಯನ್ನು ನೀಡಿದರು. ಇವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದಾಗ ಇವರ ವಯಸ್ಸು ಕೇವಲ 24ವರ್ಷ. ಇಂತಹ ಅನೇಕ ಅಪ್ರತಿಮ ಯೋಧರು ನಮಗಾಗಿ ನಮ್ಮ ತಾಯ್ನಾಡಿಗಾಗಿ ಗಡಿಯಲ್ಲಿ ಇಂದಿಗೂ ಹೋರಾಡುತಿದ್ದಾರೆ. ಕಾರ್ಗಿಲ್ ಯುದ್ಧದ 15ನೇ ವಿಜಯೋತ್ಸವದ ಈ ವರ್ಷದಲ್ಲಾದರು ನಾವು ಇವರನ್ನು ನೆನಪಿಸಿಕೊಂಡರೆ ಅದೇ ನಾವು ಇವರಿಗೆ ನೀಡುವ ನಿಜವಾದ ಶ್ರದ್ಧಾಂಜಲಿ.

ಇಂತಹ ವೀರ ಸೈನಿಕರನ್ನು ಕಂಡ ಭಾರತಮಾತೆಯೇ ಧನ್ಯ