“ಹೇ ಮಾತೃಭೂಮಿಯೇ! ನಿನ್ನ ಸೇವೆಗೆಂದೇ ನಾನಿದ್ದೇನೆ. ನೇಣುಗಂಬವೇ ದೊರೆಯಲಿ, ಆಜನ್ಮ ಸೆರೆಯೇ ದೊರೆಯಲಿ, ಕೈಗೆಹಾಕಿದ ಸಂಕೋಲೆಗಳಿಂದಲೇ ತಾಳ ಬಾಜಿಸುತ್ತಾನಿನ್ನ ಭಜನೆಮಾಡುತ್ತೇನೆ”

-ಅಶ್ಫಾಕ್ ಉಲ್ಲಾ ಖಾನ್



    ಅಶ್ಫಾಕ್ ಉಲ್ಲಾಖಾನ್‍ರವರ ಜನನ 1900ರ ಅಕ್ಟೋಬರ್ 22ರಂದು ಉತ್ತರ ಪ್ರದೇಶದ ಷಹಜಹಾನ್ ಪುರದ ಪಠಾಣ ಕುಟುಂಬದಲ್ಲಾಯಿತು. ಇವರ ತಾಯಿ ಮಜೂóರ್ ಉನ್ನೀಸ ಬೇಗಂ ಹಾಗೂ ತಂದೆ ಷಫಿಕ್ ಉಲ್ಲಾ ಖಾನ್. ಇವರ ಹಿರಿಯ ಸಹೋದರ ರಿಯಾಸತ್ ಉಲ್ಲಾ ಖಾನ್‍ರವರು ಪಂಡಿತ್ ರಾಮಪ್ರಸಾದ್ ಬಿಸ್ಮಿಲ್ಲಾರವರ ಸಹಪಾಠಿಯಾಗಿದ್ದರು.

    ಬ್ರಿಟೀಷ್ ಸರ್ಕಾರವು ಮಣಿಪುರದ ಪಿತೂರಿಯ ನಂತರ ಬಿಸ್ಮಿಲ್ಲಾರವರನ್ನು ಪಲಾಯನಗಾರ ಎಂದು ಘೋಷಿಸಿದರು. ಆ ಸಂದರ್ಭದಲ್ಲಿ ರಿಯಾಸತ್ ತನ್ನ ತಮ್ಮನಿಗೆ ಬಿಸ್ಮಿಲ್‍ರ ದೇಶಭಕ್ತಿ, ಶೌರ್ಯ ಮತ್ತು ಅವರ ಉರ್ದು ಶಾಯರಿಗಳನ್ನು ಹೇಳುತ್ತಿದ್ದರು, ಇದರಿಂದ ಪ್ರಭಾವಿತರಾದ ಅಶ್ಫಾಕ್ ಬಿಸ್ಮಿಲ್‍ರ ಸ್ನೇಹ ಸಂಪಾದಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಬೇಕೆಂದು ನಿಶ್ಚಯಿಸಿದ್ದರು.

     1922ರಲ್ಲಿ ನಡೆದ ಚೌರಿಚೋರ ಹತ್ಯಾಕಾಂಡದಿಂದ ಮನನೊಂದ ಅಶ್ಫಾಕ್ ಹೇಗಾದರು ದೇಶವನ್ನು ಬಹುಬೇಗ ಸ್ವತಂತ್ರ್ಯಗೊಳಿಸಬೇಕು ಎಂಬ ಹಂಬಲದಿಂದ ಬಿಸ್ಮಿಲ್‍ರವರು ಸ್ಥಾಪಿಸಿದ್ದ “ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್” (ಹೆಚ್.ಆರ್.ಎ) ಎಂಬ ಕ್ರಾಂತಿಕಾರಿಗಳ ಸಂಸ್ಥೆಯನ್ನು ಸೇರಿದರು.

     ಬ್ರಿಟೀಷರನ್ನು ಕೇವಲ ಮಾತುಗಳಿಂದ ಬಗ್ಗು ಬಡಿಯಲು ಸಾಧ್ಯವಿಲ್ಲ ಎಂದು ತಿಳಿದು ಬಾಂಬುಗಳು, ರಿವಾಲ್ವರುಗಳು ಮತ್ತು ಇತರ ಆಯುಧಗಳನ್ನು ಬಳಸಲು ಚಿಂತನೆ ನಡೆಸಿದ ಕ್ರಾಂತಿಕಾರಿಗಳು, ರಾಮ್‍ಪ್ರಸಾದ್ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ಲಾ ಖಾನ್‍ರ ನೇತೃತ್ವದಲ್ಲಿ ಒಂದೆರಡು ಗ್ರಾಮಗಳಲ್ಲಿ ಡಕಾಯಿತಿ ನಡೆಸಿ ಬಂದ ಹಣವನ್ನು ಪಕ್ಷದ ವಿಶಾಲ ಕಾರ್ಯಗಳಿಗೆ ಬಳಸಿದರು.

    ಬ್ರಿಟೀಷರ ವಿರುದ್ಧ ನಿರ್ಣಾಯಕ ಹೋರಾಟವನ್ನು ಸಂಘಟಿಸಲು ಹಿಂದುಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್‍ನ ಮೂಲಕ 1925ರ ಆಗಸ್ಟ್ 9ರಂದು ಬ್ರಿಟೀಷರ ಖಜಾನೆಯನ್ನು ಹೊತ್ತು ಷಹಜಹಾನ್ ಪುರದಿಂದ ಲಖನೌಗೆ ತೆರಳುತ್ತಿದ್ದ ರೈಲನ್ನು ಕಾಕೋರಿಯಲ್ಲಿ ತಡೆದು ಲೂಟಿ ಮಾಡುವ ಸುಸಜ್ಜಿತ ಸಂಚನ್ನು ಬಿಸ್ಮಿಲ್ಲರು ರೂಪಿಸಿದರು. ನಂತರ ಬಿಸ್ಮಿಲ್ಲರ ನೇತೃತ್ವದಲ್ಲಿ ಚಂದ್ರಶೇಖರ್ ಆಜಾದ್, ಅಶ್ಫಾಕ್ ಉಲ್ಲಾ ಖಾನ್, ಬನ್ವಾರಿ ಲಾಲ್‍ರಂತಹ ಕ್ರಾಂತಿಕಾರಿಗಳನ್ನೊಳಗೊಂಡ ಹತ್ತು ಜನರ ತಂಡವು ಈ ಸಂಚನ್ನು ಸಾಧಿಸಿತು. ಈ ‘ಕಾಕೋರಿ ಲೂಟಿ'ಯಿಂದ ಜರ್ಝರಿತವಾದ ಬ್ರಿಟೀಷ್ ಸರ್ಕಾರವು ಒಂದು ತಿಂಗಳ ಸುದೀರ್ಘ ತನಿಖೆಯನ್ನು ನಡೆಸಿ ಬಿಸ್ಮಿಲ್, ರೋಶನ್ ಸಿಂಗ್, ರಾಜೇಂದ್ರನಾಥ್ ಲಹಿರಿ ಮತ್ತು ಇತರ ಕ್ರಾಂತಿಕಾರಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರೂ ಅಶ್ಫಾಕ್‍ರನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ.

    ಅಶ್ಫಾಕ್‍ರವರನ್ನು ಹೊರತು ಉಳಿದವರೆಲ್ಲಾ ಸಿಕ್ಕಿ ಬಿದ್ದ ನಂತರ ಷಹಜಹಾನ್ ಪುರದಲ್ಲಿ ಅಡಗಿ ಕುಳಿತಿರುವುದು ವ್ಯರ್ಥವೆಂದು ಅರಿತ ಅವರು ಹಣವನ್ನು ಒದಗಿಸಿಕೊಂಡು ಬಿಹಾರ್‍ಗೆ ಹೋಗಿ ಅಲ್ಲಿನ ಪಲಾಮು ಜಿಲ್ಲೆಯ ಡಾಲ್ಟನ್ ಗಂಜಿನಲ್ಲಿರುವ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಗುಮಾಸ್ತರಾಗಿ ಕೆಲಸಕ್ಕೆ ಸೇರಿ ಹತ್ತು ತಿಂಗಳು ದುಡಿದರು.

    ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಲು ವಿದೇಶಕ್ಕೆ ತೆರಳಿ ಲಾಲಾಹರ್ ದಯಾಲ್‍ರನ್ನು ಭೇಟಿ ಮಾಡಲು ಚಿಂತಿಸಿದ ಅಶ್ಫಾಕ್‍ರವರು ದೆಹಲಿಗೆ ತೆರಳಿ ತನ್ನ ಪಠಾಣ ಮಿತ್ರನ ಸಹಾಯವನ್ನು ಕೋರಿದರು. ಆದರೆ ಪಠಾಣ ಮಿತ್ರ ಪೋಲೀಸರಿಗೆ ಮಾಹಿತಿಯನ್ನು ನೀಡಿ ಅಶ್ಫಾಕ್‍ರನ್ನು ಸೆರೆಹಿಡಿಯುವಂತೆ ಮಾಡಿ ದ್ರೋಹವೆಸಗಿ ಫೈಜಾಬಾದ್ ಜೈಲು ಸೇರುವಂತೆ ಮಾಡಿದ.

    ಕಾಕೋರಿ ಲೂಟಿ ಪ್ರಕರಣದ ವಿಶೇಷ ನ್ಯಾಯಮೂರ್ತಿಯಾಗಿದ್ದ ಜೆ.ಆರ್.ಡಬ್ಲ್ಯೂ.ವ್ಯೂನಾಟ್‍ರವರು 1927ರ ಸೆಪ್ಟೆಂಬರ್ 16ರಂದು ಇಂಡಿಯನ್ ಪೀನಲ್ ಕೋಡ್‍ನ ಸೆಕ್ಷನ್ 121(A), 120(B), 302 ಮತ್ತು 396ರ ಅಡಿಯಲ್ಲಿ ಇಡೀ ಪ್ರಕರಣದ ಪ್ರಮುಖ ಕ್ರಾಂತಿಕಾರಿಗಳಾದ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕ್ ಉಲ್ಲಾ ಖಾನ್, ರೋಶನ್ ಸಿಂಗ್ ಮತ್ತು ರಾಜೇಂದ್ರನಾಥ್ ಲಹಿರಿಯವರುಗಳನ್ನು ನೇಣಿಗೇರಿಸುವಂತೆ ತೀರ್ಪನ್ನು ನೀಡಿದರು. ನ್ಯಾಯಾಲಯದ ಆದೇಶದಂತೆ 1927ರ ಡಿಸೆಂಬರ್ 19ರಂದು ಫೈಜಾಬಾದ್ ಜೈಲಿನಲ್ಲಿ ಅಶ್ಫಾಕ್ ಉಲ್ಲಾ ಖಾನ್‍ರನ್ನು ನೇಣಿಗೇರಿಸಲಾಯಿತು.

     ಇಂತಹ ಶೂರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ನಾವು ಇಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ಮಹಾನ್ ಹೋರಾಟಗಾರರನ್ನು ಕಂಡ ಭಾರತ ಮಾತೆಯೇ ಧನ್ಯ.