“ನಾನು ಸತ್ತರೂ ಚಿಂತೆ ಇಲ್ಲಾ ರಾಣಿ ಲಕ್ಷ್ಮೀಬಾಯಿ ಉಳಿಯಬೇಕು, ರಾಣಿ ಉಳಿದರೆ ಝಾನ್ಸಿ ಉಳಿಯುತ್ತದೆ, ಝಾನ್ಸಿ ಉಳಿದರೆ ದೇಶ ಉಳಿಯುತ್ತದೆ.”

-ವೀರ ಝಲ್ಕರಿ ಬಾಯಿ



    ಝಲ್ಕರಿ ಬಾಯಿಯ ಜನನ 1830ರ ನವೆಂಬರ್ 22ರಂದು ಝಾನ್ಸಿಯ ಸಮೀಪದಲ್ಲಿರುವ ಭೋಜ್ಲ ಎಂಬ ಹಳ್ಳಿಯ ಒಂದು ಬಡ ಕುಟುಂಬದಲ್ಲಾಯಿತು. ಇವಳ ತಂದೆ ಸದೋಬಾ ಸಿಂಗ್, ತಾಯಿ ಜಮುನಾ ದೇವಿ. ಅಂದಿನ ಸಾಮಾಜಿಕ ಪಿಡುಗುಗಳ ಪ್ರಭಾವದಿಂದ ಝಲ್ಕರಿ ಬಾಯಿಗೆ ಅವಶ್ಯಕವಾದ ಪ್ರಾಥಮಿಕ ವಿದ್ಯಾಭ್ಯಾಸವೂ ಸಿಗಲಿಲ್ಲ. ಆದರೆ ತಾಯಿಯ ಮರಣದ ನಂತರ ಝಲ್ಕರಿ ಬಾಯಿಯ ತಂದೆ ಇವಳನ್ನು ಗಂಡು ಮಗುವಿನ ರೀತಿಯಲ್ಲಿ ಬೆಳೆಸಿದರು. ಇದರ ಪರಿಣಾಮದಿಂದ ಅಸ್ತ್ರವಿದ್ಯೆ ಮತ್ತು ಅಶ್ವವಿದ್ಯೆಯಲ್ಲಿ ಪರಿಣತಿ ಹೊಂದಿದಳು.

     ಬಾಲ್ಯದ ದಿನಗಳಲ್ಲಿ ಝಲ್ಕರಿ ಬಾಯಿಯು ತನ್ನ ಮನೆಯಲ್ಲಿದ್ದ ಕುರಿಗಳನ್ನು ಕಾಡಿಗೆ ಕರೆದುಕೊಂಡು ಹೋದಾಗ, ಅವುಗಳನ್ನು ತಿನ್ನಲು ಚಿರತೆಯೊಂದು ಬಂದಿತು. ಅದನ್ನು ನೋಡಿದ ತಕ್ಷಣ ಎಂತಹ ಗಂಡೆದೆಯವರೂ ಒಂದು ಕ್ಷಣ ಹೆದರುವುದು ಸಹಜ, ಆದರೆ ಇವಳು ಹೆದರದೇ ತನ್ನ ಬಳಿಯಲ್ಲಿದ್ದ ಕೋಲಿನಿಂದ ಆ ಚಿರತೆಯನ್ನು ಕೊಂದು ಕುರಿಗಳನ್ನು ರಕ್ಷಿಸಿದಳು. ಅಂದಿನಿಂದ ಇವಳು ವೀರ ಝಲ್ಕರಿಯಾದಳು ಏಕೆಂದರೆ ಚಿರತೆಯನ್ನು ಕೊಂದ ವೀರ ಮಹಿಳೆ ಅಲ್ಲವೇ ಇವಳು.

    ಪ್ರಾಪ್ತ ವಯಸ್ಸಿಗೆ ಬಂದ ನಂತರ, ಝಾನ್ಸಿಯ ಸೈನ್ಯದ ಸಿಪಾಯಿಯಾದ ಪೂರನ್ ಸಿಂಗ್‍ನೊಂದಿಗೆ ಇವಳ ವಿವಾಹವಾಯಿತು. ಹಾಗೆ ಅವನ ಸಹಾಯದಿಂದ ರಾಣಿ ಲಕ್ಷೀಬಾಯಿಯ ಪರಿಚಯವೂ ಆಯಿತು. ಝಾನ್ಸಿಯ ಸೈನ್ಯಕ್ಕೆ ಸೇರಿ ಯುದ್ಧ ಕೌಶಲ್ಯಗಳಲ್ಲಿ ಮತ್ತಷ್ಟು ಪ್ರಾಬಲ್ಯ ಹೊಂದಿದಳು.

     1858ರ ಮಾರ್ಚ್ 23ರಂದು ಜನರಲ್ ಹ್ಯೂಗ್ ರೋಸ್ ಝಾನ್ಸಿಯ ಮೇಲೆ ದಾಳಿ ಮಾಡಿದನು. ತಾತ್ಯ ಟೋಪೆಯವರು ಬ್ರಿಟೀಷರ ವಿರುದ್ಧ ಸೋತಿದ್ದ ಕಾರಣ ಪೇಶ್ವಾ ಸೈನ್ಯದ ಸಹಾಯವೂ ಕೂಡ ರಾಣಿ ಲಕ್ಷ್ಮೀಬಾಯಿಗೆ ದೊರೆಯಲಿಲ್ಲ. ಎಲ್ಲೆಡೆಯಿಂದ ಬ್ರಿಟೀಷರ ದಾಳಿ ತೀವ್ರವಾಗಲು, ರಾಣಿ ಲಕ್ಷ್ಮೀಬಾಯಿಯ ಸೇನಾಧಿಪತಿಯು ಅವಳನ್ನು ಭಂದೇರಿ ಗೇಟ್‍ನ ಮೂಲಕ ತಪ್ಪಿಸಿಕೊಳ್ಳುವಂತೆ ಸಲಹೆ ನೀಡಿದನು.

     ಇದನ್ನು ತಿಳಿದ ಝಲ್ಕರಿ ಬಾಯಿಯು, ನೋಡಲು ಸಹ ರಾಣಿಯನ್ನು ಹೋಲುತ್ತಿದ್ದರಿಂದ ತಾನೆ ಲಕ್ಷ್ಮೀಬಾಯಿಯಂತೆ ಮಾರುವೇಷ ಧರಿಸಿ ಯುದ್ಧವನ್ನು ಮುಂದುವರೆಸಿದಳು. ಅಷ್ಟು ಮಾತ್ರವಲ್ಲಾ ಬ್ರಿಟೀಷರ ಕಣ್ಣು ತಪ್ಪಿಸಿ ಮತ್ತೆ ಕೋಟೆಯನ್ನು ಸೇರಿ ತನ್ನ ಗಂಡನ ಬಳಿ ಹೋಗಿ ಬ್ರಿಟೀಷರ ಗುಂಪುಗಳನ್ನು ತೋರಿಸಿ ಫಿರಂಗಿಯಿಂದ ಗುಂಡುಗಳನ್ನು ಹಾರಿಸಲು ಹೇಳಿದಳು. ಇದರಿಂದ ಬ್ರಿಟೀಷ್ ಸೈನ್ಯಕ್ಕೆ ಅಪಾರ ನಷ್ಟವಾಯಿತು.

     ಇದನ್ನು ಸಹಿಸದ ಬ್ರಿಟೀಷರು ಪೂರನ್ ಸಿಂಗ್‍ನನ್ನು ಕೊಂದರು. ತನ್ನ ಗಂಡನ ಹತ್ಯೆಯಾಗಿದ್ದರೂ ಧೃತಿಗೆಡದೆ ತಾನೇ ಫಿರಂಗಿಗಳಿಗೆ ಗುಂಡುಗಳನ್ನು ತುಂಬಿಸಿ ವೀರೋಚಿತವಾಗಿ ಹೋರಾಟವನ್ನು ಮುಂದುವರೆಸಿದಳು. ಆದರೆ ಬ್ರಿಟೀಷರ ಸೈನ್ಯದಿಂದ ಬಂದ ಗುಂಡೊಂದು ಝಲ್ಕರಿ ಬಾಯಿಯ ಪ್ರಾಣವನ್ನು ಹೀರಿತು. ರಾಣಿ ಲಕ್ಷ್ಮೀಬಾಯಿಯನ್ನೇ ಕೊಂದೆವೆಂದು ತಪ್ಪಾಗಿ ತಿಳಿದ ಬ್ರಿಟೀಷ್ ಅಧಿಕಾರಿಗಳು ಇವಳನ್ನು ನೋಡಿ ರಾಣಿ ಅಲ್ಲವೆಂದು ತಿಳಿದು ಸಲಾಮು ಹೊಡೆದು ಗೌರವ ತೋರಿದರು.

     ಇಂತಹ ವೀರ ಮಹಿಳೆಯರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ನಾವು ಇಂದು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ಮಹಾನ್ ಹೋರಾಟಗಾರ್ತಿಯರನ್ನು ಕಂಡ ಭಾರತ ಮಾತೆಯೇ ಧನ್ಯ.