ವಾಸುದೇವ್ ಬಲುವಂತ್ ಫಡ್ಕೆಯವರು 1845ನೇ ಇಸವಿಯ ನವಂಬರ್ 4ರಂದು ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯ ಪಾನ್ವೇಲ್ ತಾಲ್ಲೂಕಿನ ಶಿರ್ಧೋನ್ ಗ್ರಾಮದಲ್ಲಿ ಒಂದು ಮರಾಠಿ ಚಿತ್ಪವನ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರನ್ನು ‘ಶಸ್ತ್ರಸಜ್ಜಿತ ಹೋರಾಟದ ಪಿತಾಮಹ’ ಎಂದೇ ಕರೆಯುತ್ತಾರೆ. ಬಾಲ್ಯದಲ್ಲಿ ಫಡ್ಕೆಯವರಿಗೆ ಶಿಕ್ಷಣಕ್ಕಿಂತಲೂ ಕುಸ್ತಿಯಂತಹ ಕಲೆಗಳಲ್ಲಿ ಹೆಚ್ಚು ಆಸಕ್ತಿ ಇದ್ದುದ್ದರಿಂದ ಶಾಲೆಯಿಂದ ಹೊರಬಂದು ಪುಣೆಗೆ ತೆರಳಿ ಅಲ್ಲಿ ಮಿಲಿಟರಿ ಲೆಕ್ಕಪತ್ರಗಳ ವಿಭಾಗದಲ್ಲಿ ಗುಮಾಸ್ತರಾಗಿ 15 ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಅದೇ ಸಮಯದಲ್ಲಿ ಅವರು ತಮ್ಮ ಗುರುಗಳಾದ ಕ್ರಾಂತಿವೀರ ಲಾಹೂಜಿ ಉಸ್ತಾದ್ ಸಾಲ್ವೆ ಹಾಗೂ ಗೋವಿಂದ ರಾನಡೆಯಂತಹ ಹೋರಾಟಗಾರರಿಂದ ಭಾರತ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಅರಿತುಕೊಂಡರು. ನಂತರ ಅವರು `ಐಕ್ಯ ವರ್ಧಿನಿ ಸಭಾ' ಎಂಬ ಸಂಸ್ಥೆಯನ್ನು ಯುವ ಜನಾಂಗದ ಶಿಕ್ಷಣಕ್ಕಾಗಿ ಹುಟ್ಟುಹಾಕಿದರು. ಅವರು ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಸಂಸ್ಥೆಯು ಫಡ್ಕೆಯವರು ಕೇಳಿದ ರಜೆಯನ್ನು ನೀಡಲು ನಿಧಾನಿಸಿದ್ದರಿಂದ ಕಡೆಗಾಲದಲ್ಲಿ ಅವರ ತಾಯಿಯನ್ನು ಫಡ್ಕೆಯವರು ನೋಡಲಾಗಲಿಲ್ಲ. ಇಂತಹ ಘಟನೆಗಳು ಫಡ್ಕೆಯವರನ್ನು ಕೆರಳಿಸಿತು.

     ಕ್ರಿ.ಶ 1875ರಲ್ಲಿ ಬರೋಡಾದ ಗಾಯಕ್ವಾಡ್ ರಾಜನನ್ನು ಬ್ರಿಟಿಷರು ಕಿತ್ತೊಗೆದ ಸಮಯದಲ್ಲಿ ಫಡ್ಕೆಯವರು ಆಡಳಿತ ಸರ್ಕಾರದ ವಿರುದ್ಧ ಪ್ರತಿಭಟನಾಕಾರಿ ಭಾಷಣಗಳನ್ನು ಕೊಡಲಾರಂಭಿಸಿದರು. ತೀವ್ರ ಬರಗಾಲ ಹಾಗೂ ಬ್ರಿಟಿಷ್ ಸರ್ಕಾರದ ಮೃದು ಧೋರಣೆಯಿಂದಾಗಿ ಫಡ್ಕೆಯವರು ಡೆಕ್ಕನ್ ಪ್ರಾಂತ್ಯವನ್ನು ಸುತ್ತಿ ಅಲ್ಲಿನ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡುವಂತೆ ಪ್ರೇರೇಪಿಸಿದರು. ಆದರೆ ಅವರಿಗೆ ಅಕ್ಷರಸ್ತರ ಸಹಕಾರ ಸಿಗಲಿಲ್ಲವಾದ್ದರಿಂದ ಅವರು ರಾಮೋಶಿ, ಕೋಲಿ, ಭಿಲ್ ಹಾಗೂ ಧಂಗಾರ್‍ರಂತ ಅನಕ್ಷರಸ್ತ ಜನಾಂಗದ ಸುಮಾರು ಮುನ್ನೂರಕ್ಕೂ ಹೆಚ್ಚು ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯಹೋರಾಟಕ್ಕಿಳಿದರು. ಫಡ್ಕೆಯವರು ತಮ್ಮದೇ ಸೈನ್ಯವನ್ನು ಕಟ್ಟುವ ನಿಟ್ಟಿನಲ್ಲಿ ಹಣದ ತೊಂದರೆಯಾದಾಗ ಸರ್ಕಾರದ ಖಜಾನೆಯಿಂದ ಹಣವನ್ನು ಲೂಟಿ ಮಾಡಲಾರೆಂಭಿಸಿದರು. ಮೊದಲನೆಯ ಬಾರಿಗೆ ಪುಣೆಯ ಶಿರೂರ್ ತಾಲ್ಲೂಕಿನ ಧರ್ಮಾರಿ ಎಂಬ ಹಳ್ಳಿಯ ಒಬ್ಬ ಸ್ಥಳೀಯ ವಹಿವಾಟುದಾರರಾದ ಬಾಲ್ಚಂದ್ ಫೋಜಮಾಲ್ ಸಾಂಕ್ಲ ಎಂಬುವವರ ಮನೆಯಲ್ಲಿಟ್ಟಿದ್ದ ಆದಾಯ ತೆರಿಗೆಯ ಹಣವನ್ನು ಫಡ್ಕೆಯವರ ಸೈನ್ಯ ದೋಚಿತು. ಅದನ್ನು ಬರಪೀಡಿತ ಹಳ್ಳಿಯ ಜನರಿಗೆ ವಿತರಿಸಲಾಯಿತು. ಆದರೆ ಅದು ಫಡ್ಕೆಯವರನ್ನು ಡಕಾಯಿತ ಎಂಬಂತೆ ಬಿಂಬಿಸಿತು. ಆದ್ದರಿಂದ ಅವರು ಹಳ್ಳಿಯಿಂದ ಹಳ್ಳಿಗೆ ಪಲಾಯನ ಮಾಡತೊಡಗಿದರು. ಇಂತಹ ಸಮಯದಲ್ಲಿ ಹಿಂದುಳಿದ ವರ್ಗದ ಜನರ ಮನೆಗಳಲ್ಲಿ ಹಾಗೂ ಅರಣ್ಯ ಪ್ರದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ಫಡ್ಕೆಯವರ ಸೈನ್ಯವು ಸುಮಾರು ದಾಳಿಗಳನ್ನು ಪೂಣೆಯ ಶಿರೂರ್ ಮತ್ತು ಖೇದ್ ತಾಲ್ಲೂಕುಗಳಲ್ಲಿ ನಡೆಸಿತು.

    ಈ ರೀತಿಯಾಗಿ ವಾಸುದೇವ್ ಬಲವಂತ್ ಫಡ್ಕೆಯವರ ಸೈನ್ಯದ ಆರ್ಥಿಕ ಪರಿಸ್ಥಿತಿ ವೃದ್ಧಿಸಿತು. ಆದರೆ ಫಡ್ಕೆಯವರ ಜೊತೆಗಿದ್ದ ಹೋರಾಟಗಾರರಿಗೆ, ಫಡ್ಕೆಯವರ ಹೋರಾಟದ ಆದರ್ಶಗಳಿಗಿಂತ ಲೂಟಿ, ಆಸ್ತಿ ಇವುಗಳಲ್ಲಿಯೇ ಹೆಚ್ಚು ಆಸಕ್ತಿಯಿರುವುದು ಅವರಿಗೆ ತಿಳಿಯಿತು. ಆದ್ದರಿಂದ ಅವರು ಹೊಸ ಜಾಗವನ್ನು ಹುಡುಕಿಕೊಂಡು ದಕ್ಷಿಣದ ಶ್ರೀಶೈಲ ಕ್ಷೇತ್ರವನ್ನು ತಲುಪಿದರು. ಈ ನೈತಿಕ ಸೋಲಿನ ನಡುವೆಯೂ ಫಡ್ಕೆಯವರು ಮತ್ತೆರೊಹಿಲ್ಲಾ ಜನಾಂಗದ ಐನೂರಕ್ಕೂ ಹೆಚ್ಚು ಜನರನ್ನು ಒಗ್ಗೂಡಿಸಿ ಬಲಿಷ್ಠ ಸೈನ್ಯವನ್ನು ಕಟ್ಟಿ ಹೊಸದಾಗಿ ಹೋರಾಟವನ್ನು ಮುಂದುವರೆಸಿದರು.

     ಫಡ್ಕೆಯವರು ಒಂದೇ ಸಮಯದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧದೇಶದುದ್ದಕ್ಕೂ ದಾಳಿ ನಡೆಸಿದರು. ಆದರೆ ಅದು ಅಷ್ಟೇನು ಜಯ ಕಾಣಲಿಲ್ಲ. ಅವರು ಒಂದು ಬಾರಿ ಘನೂರ್ ಎಂಬ ಹಳ್ಳಿಯಲ್ಲಿ ಬ್ರಿಟಿಷ್ ಸೈನ್ಯದೊಂದಿಗೆ ನೇರ ಹೋರಾಟಕ್ಕೆ ಇಳಿದರು. ಇದಾದ ನಂತರ ಬ್ರಿಟಿಷ್ ಸರ್ಕಾರ ಫಡ್ಕೆಯವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿದರು. ಧೈರ್ಯಗೆಡದ ಫಡ್ಕೆಯವರು ಇದಕ್ಕೆ ಉತ್ತರವಾಗಿ ಬಾಂಬೆಯ ರಾಜ್ಯಪಾಲರನ್ನೇ ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿದರು, ಮತ್ತು ಭಾರತದಲ್ಲಿದ್ದ ಬ್ರಿಟಿಷ್‍ರನ್ನು ಹಿಡಿದುಕೊಟ್ಟವರಿಗೆ ಬಹುಮಾನಗಳನ್ನು ಘೋಷಿಸಿದರು. ಇನ್ನಿತರ ರೀತಿಗಳಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಬೆದರಿಕೆಗಳನ್ನೊಡ್ಡಿದರು. ಆನಂತರದಲ್ಲಿ ಹೈದರಾಬಾದ್ ಪ್ರಾಂತ್ಯಕ್ಕೆ ಹೋದ ಫಡ್ಕೆಯವರು ಅಲ್ಲಿನ ರೊಹಿಲ್ಲಾ ಹಾಗೂ ಅರಬ್ ಜನಾಂಗದವರನ್ನು ಅವರ ಸೈನ್ಯಕ್ಕೆ ಸೇರಿಸಿಕೊಂಡರು. ಇದೇ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಮೇಜರ್ ಹೆನ್ರಿ ವಿಲಿಯಮ್ ಡೇನಿಯಲ್ ಹಾಗೂ ಹೈದರಾಬಾದ್ ನಿಜಾಮರಿಗೆ ಆರಕ್ಷಕ ಅಧಿಕಾರಿಯಾಗಿದ್ದ ಅಬ್ದುಲ್ ಹೇಖ್ ಎಂಬಿಬ್ಬರು ಫಡ್ಕೆರವರ ಓಡಾಟವನ್ನು ಹಗಲು ರಾತ್ರಿ ಗಮನಿಸಿದರು. ನಂತರ ಫಡ್ಕೆಯವರು 20ನೇ ಜುಲೈ 1879ರಂದು ಪಂಡರಾಪುರಕ್ಕೆ ಹೋಗುವ ದಾರಿಯಲ್ಲಿ ಕಲಡಗಿಯಂಬ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಫಡ್ಕೆಯವರು ವಿಶ್ರಮಿಸುತ್ತಿರುವ ಸಂದರ್ಭದಲ್ಲಿ ಮೋಸದಿಂದ ಹಿಡಿದರು. ಅವರನ್ನು ಮೊದಲು ಪುಣೆಗೆ ಕರೆದುಕೊಂಡು ಹೋದರು ಅನಂತರ ಆದೇನ್ ಎಂಬ ಊರಿನಲ್ಲಿರುವ ಜೈಲಿಗೆ ಸ್ಥಳಾಂತರಿಸಲಾಯಿತು. 13ನೇ ಫೆಬ್ರವರಿ 1883ರಂದು ಬಾಗಿಲನ್ನು ಮುರಿದು ಜೈಲಿನಿಂದ ತಪ್ಪಿಸಿಕೊಂಡರೂ ಸಹ ಸೆರೆಹಿಡಿಯಲಾಯಿತು ಕೊನೆಗೆ ಆಮರಣಾಂತ ಉಪವಾಸಕ್ಕೆ ಕುಳಿತ ಫಡ್ಕೆಯವರು 17ನೇ ಫೆಬ್ರವರಿ 1883ರಂದು ಕೊನೆಯುಸಿರೆಳೆದರು. ಫಡ್ಕೆರವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರಾದರೂ ಅವರನ್ನು ಸ್ಮರಿಸುವುದೂ ಸಹ ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿದೆ. ಅವರ ಸಾಹಸ ಗಾಥೆಗಳನ್ನು ನಾವು ಬಂಕಿಮ್ ಚಂದ್ರ ಚಟರ್ಜಿಯವರ `ಆನಂದ್ ಮಠ್’ ಕಾದಂಬರಿಯಲ್ಲಿ ಓದಬಹುದು. 1984ರಲ್ಲಿ ಭಾರತೀಯ ಅಂಚೆ ಸೇವೆಯವರು ಇವರ ಭಾವಚಿತ್ರವಿರುವ 50 ಪೈಸೆ ಟಪಾಲು ಚೀಟು ಬಿಡುಗಡೆ ಮಾಡಿದರು. ಅವರ ಹೆಸರಿನ ಚೌಕವೊಂದನ್ನು ದಕ್ಷಿಣ ಮುಂಬೈನಲ್ಲಿ ನಾವು ಕಾಣಬಹುದು.

     ಇಂತಹ ಮಹಾನ್ ಹೊರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.