"ತಾಯಿ, ಬಡವ ಹಾಗೂ ಅಜ್ಞಾನಿಯಾದ ನನ್ನಂಥ ಮಗನಿಂದ ರಕ್ತವನ್ನು ಬಿಟ್ಟು ಇನ್ನೇನು ತಾನೆ ಅರ್ಪಿಸಲು ಸಾಧ್ಯ. ಇದೋ ಭಾರತಾಂಬೆ ನಿನ್ನ ಮಡಿಲಿಗೆ ನನ್ನ ಪ್ರಾಣವನ್ನು ಅರ್ಪಿಸುತ್ತಿದ್ದೇನೆ"

- ಮದನ್ ಲಾಲ್ ಧಿಂಗ್ರಾ



    ಮದನ್ ಲಾಲ್ ಧಿಂಗ್ರಾರವರ ಜನನ 1883ರ ಫೆಬ್ರವರಿ 18ರಂದು ಪಂಜಾಬಿನ ಅಮೃತ್ಸರ್‍ನಲ್ಲಾಯಿತು. ಇವರು 1900ರವರೆಗೂ ಅಮೃತ್ಸರ್‍ನ ಎಂ.ಬಿ ಇಂಟರ್‍ಮೀಡಿಯೇಟ್ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದರು. ನಂತರ ಲಾಹೋರಿನ ಸರ್ಕಾರಿ ವಿಶ್ವವಿದ್ಯಾನಿಲಯದ ಕಾಲೇಜಿಗೆ ಸೇರಿ ಎಂ.ಎ ಪದವೀಧರರಾದರು. 1904ರಲ್ಲಿ ಇಂಗ್ಲೆಂಡ್‍ನಲ್ಲಿ ತಯಾರಾದ ಕೋಟನ್ನು ಧರಿಸಬೇಕೆಂದು ಬಂದ ಪ್ರಾಂಶುಪಾಲರ ಆದೇಶದ ವಿರುದ್ಧ ಪ್ರತಿಭಟನೆಯಲ್ಲಿ ಮುಂದಾಳತ್ವ ವಹಿಸಿದ್ದರಿಂದ ಧಿಂಗ್ರಾರವರನ್ನು ಕಾಲೇಜಿನಿಂದ ಅಮಾನತ್ತು ಮಾಡಲಾಯಿತು.

    ಭಾರತದಲ್ಲಿನ ಬಡತನದ ಬಗ್ಗೆ ಅತ್ಯಂತ ಹೆಚ್ಚಿನ ಸಂಶೋಧನೆ ಮಾಡಿದ ಇವರು, ಈ ಸಮಸ್ಯೆಗಳು ಬಗೆಹರಿಯಬೇಕೆಂದರೆ ಅದು ಸ್ವದೇಶಿ ಹಾಗೂ ಸ್ವರಾಜ್ಯ ಎರಡರಿಂದ ಮಾತ್ರ ಸಾಧ್ಯವೆಂದು ತಿಳಿದುಕೊಂಡರು. ಆದರೆ ಇವರ ಅಣ್ಣನಾದ ಬಿಹಾರೀಲಾಲ್‍ರವರ ಸಲಹೆಯಂತೆ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಇಂಗ್ಲೆಂಡ್‍ಗೆ ಹೋಗಿ ಅಲ್ಲಿನ ಲಂಡನ್ ವಿಶ್ವವಿದ್ಯಾನಿಲಯದ ಕಾಲೇಜಿಗೆ ಸೇರಿದರು.

    ಲಂಡನ್ನಿನ ಹೈಗೇಟ್‍ನಲ್ಲಿ ಶ್ಯಾಮ್‍ಜೀ ಕೃಷ್ಣವರ್ಮರವರಿಂದ ಸ್ಥಾಪಿತವಾದ ಇಂಡಿಯಾ ಹೌಸ್ ಎಂಬ ಸಂಸ್ಥೆ, ಅನೇಕ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಭೇಟಿ ನೀಡುವ ಸ್ಥಳವಾಗಿತ್ತು. ಧಿಂಗ್ರಾರವರೂ ಸಹ ಈ ಸಂಸ್ಥೆಗೆ ಸೇರಿದರು. ಇಲ್ಲಿ ಅವರಿಗೆ ಭಾರತದ ಕ್ರಾಂತಿಕಾರಿಗಳ ಪಿತಾಮಹ ಎಂದೆನಿಸಿದ್ದ ವಿ.ಡಿ.ಸಾವರ್ಕರ್ ಮತ್ತು ಶ್ಯಾಮ್‍ಜೀ ಕೃಷ್ಣವರ್ಮರವರ ಪರಿಚಯವಾಯಿತು. ಆ ದಿನಗಳಲ್ಲಿ ಧಿಂಗ್ರಾರವರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಅಷ್ಟು ಪ್ರಮುಖವಾದ ವಿಚಾರವಾಗಿರಲಿಲ್ಲ. ಒಮ್ಮೆ ಇಂಡಿಯಾ ಹೌಸ್‍ನಲ್ಲಿ ಸಾವರ್ಕರರು ಭಾಷಣವನ್ನು ಮಾಡುತ್ತಿದ್ದಾಗ ಪಕ್ಕದ ಕೋಣೆಯಲ್ಲಿ ಸ್ನೇಹಿತರೊಂದಿಗೆ ಧಿಂಗ್ರಾರವರು ಪ್ರೇಮಗೀತೆಗಳನ್ನು ಹಾಡುತ್ತಾ ಮೋಜು ಮಾಡುತ್ತಿದ್ದರು. ತಮ್ಮ ಭಾಷಣಕ್ಕೆ ತೊಂದರೆಯಾಗುತ್ತಿದ್ದ ಕಾರಣ ಸಾವರ್ಕರರು ಧಿಂಗ್ರಾರವರನ್ನು ಕುರಿತು – “ಮದನ್, ಇದೇ ಏನು ನೀನು ಸದಾ ಮಾತನಾಡುತ್ತಿದ್ದ ವೀರೋಚಿತವಾದ ಕೆಲಸ, ನಿನ್ನಲ್ಲಿರುವ ದೇಶಪ್ರೇಮ ಹಾಡು ಮೋಜಿಗಷ್ಟೇ ಸೀಮಿತವೋ?” ಎಂದು ಮೂದಲಿಸಿದರು. ಸಾವರ್ಕರರ ಈ ಮಾತು ಧಿಂಗ್ರಾರವರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿತು. ಅಲ್ಲಿಂದ ಹೊರ ನಡೆದ ಧಿಂಗ್ರಾರವರು ಹಲವು ದಿನಗಳ ನಂತರ ಮತ್ತೆ ಇಂಡಿಯಾ ಹೌಸ್‍ಗೆ ಬಂದಾಗ ಅಲ್ಲಿ ನೆರೆದಿದ್ದ ಜನರು ಇವರನ್ನು ನೋಡಿ ಅಪಹಾಸ್ಯ ಮಾಡುತ್ತಿದ್ದರು. ಧಿಂಗ್ರಾರವರು ಸಾವರ್ಕರರನ್ನು ಕಂಡು “ಸಾವರ್ಕರ್‍ ಜೀ ನಾನು ಭಾರತದ ಯುವಕ, ನನ್ನ ರಕ್ತವೂ ತಾಯ್ನಾಡ ಪೂಜೆಗಾಗಿ ಹಾತೊರೆಯುತ್ತಿದೆ. ನನ್ನ ರಕ್ತದ ಸಾಮಥ್ರ್ಯವನ್ನು ಸಾಬೀತುಪಡಿಸುವಂತಹ ಕೆಲಸವೇನಾದರು ಇದ್ದರೆ ಹೇಳಿ.” ಎಂದು ಕೇಳಿದರು. ಧಿಂಗ್ರಾರವರ ದೇಶಪ್ರೇಮ ಹಾಗೂ ದೇಶಭಕ್ತಿಗೆ ಮೆಚ್ಚಿದ ಸಾವರ್ಕರರು “ಒಂದು ವೇಳೆ ನಿನ್ನ ರಕ್ತದ ತಾಕತ್ತನ್ನು ಸಾಬೀತುಪಡಿಸುವ ಇಚ್ಚೆ ಇದ್ದಲ್ಲಿ, ಭಾರತೀಯ ಕ್ರಾಂತಿಕಾರಿಗಳನ್ನು ಅನ್ಯಾಯದಿಂದ ಕಾಲಾಪಾನಿ ಜೈಲಿನಲ್ಲಿ ಬಂಧಿಸುತ್ತಿದ್ದ ಬ್ರಿಟೀಷ್ ಅಧಿಕಾರಿ ಕರ್ಜನ್ ವೈಲಿರನ್ನು ಕೊಂದು ನಿನ್ನ ದೇಶಪ್ರೇಮವನ್ನು ತೋರಿಸು” ಎಂದು ಹೇಳಿದರು. ಪಿಸ್ತೂಲು ಅಥವ ಆಯುಧಗಳ ಅರಿವೇ ಇಲ್ಲದ ಧಿಂಗ್ರಾರವರಿಗೆ ವಿವಿಧ ರೀತಿಯ ಆಯುಧಗಳನ್ನು ಉಪಯೋಗಿಸುವ ತಾಲೀಮನ್ನು ನೀಡಲಾಯಿತು. ನಂತರ ಸಾವರ್ಕರರು ಸ್ಥಾಪಿಸಿದ ಅಭಿನವ ಭಾರತ ಮಂಡಲವನ್ನು ಸೇರಿ, ಅಲ್ಲಿನ ಪ್ರಮುಖ ಸದಸ್ಯರಾದರು ಹಾಗೂ ಬ್ರಿಟೀಷ್ ಅಧಿಕಾರಿ ಕರ್ಜನ್ ವೈಲಿರನ್ನು ಹತ್ಯೆ ಮಾಡುವ ಸಂಚನ್ನು ರೂಪಿಸಿದರು.

    1909ರ ಜುಲೈ 1 ರಂದು ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್‍ನಲ್ಲಿ ನಡೆದ ಅಟ್ ಹೋಮ್ ಎಂಬ ವಾರ್ಷಿಕ ಸಮಾರಂಭಕ್ಕೆ ಕರ್ಜನ್ ವೈಲಿರವರು ಪತ್ನಿಯೊಂದಿಗೆ ಬರುವುದನ್ನು ಅರಿತ ಧಿಂಗ್ರಾರವರು ಸರಿಯಾದ ಸಮಯಕ್ಕಾಗಿ ಕಾದಿದ್ದು, ಸಮಾರಂಭ ಮುಗಿದ ನಂತರ ಕರ್ಸನ್ ವೈಲಿರವರ ಎದುರಿಗೆ ಬಂದು ನಿಂತು ಐದು ಗುಂಡುಗಳನ್ನು ಹಾರಿಸಿದರು. ಕರ್ಜನ್ ವೈಲಿರವರ ದೇಹ ಧರೆಗುರುಳಿತು. ಧಿಂಗ್ರಾರವರು ಪೋಲೀಸರ ಅತಿಥಿಯಾದರು.

    ಕೋರ್ಟಿನಲ್ಲಿ ತಮ್ಮ ಪರ ವಕಾಲತ್ತನ್ನು ಯಾವ ವಕೀಲರೂ ವಹಿಸುವುದು ಬೇಡವೆಂದು, ತಾವೇ ವಹಿಸಿಕೊಂಡರು. ಇದರ ಕಾರಣವನ್ನು ನ್ಯಾಯಾಧೀಶರು ಕೇಳಿದಾಗ ಧಿಂಗ್ರಾರವರು – “ಕರ್ಜನ್ ವೈಲಿರವರ ಹತ್ಯೆಯಿಂದ ನನಗೆ ಯಾವುದೇ ರೀತಿಯಾದ ವಿಷಾದವಿಲ್ಲ. ಇದು ಬ್ರಿಟೀಷರು ಭಾರತದವರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತೀಕಾರ. ಹೇಗೆ ಬ್ರಿಟೀಷರು ಜರ್ಮನರ ವಿರುದ್ಧ ಹೋರಾಡುತ್ತಿರುವುದು ದೇಶಭಕ್ತಿಯೋ, ಭಾರತೀಯರ ವಿಚಾರದಲ್ಲೂ ಸಹ ಅದು ದೇಶಭಕ್ತಿಯೇ. ಇಂಗ್ಲೆಂಡ್‍ನವರ ಸಾವಿಗೆ ಹೇಗೆ ಜರ್ಮನರು ಕಾರಣರೋ, ಅದೇ ರೀತಿ ನನ್ನ ದೇಶದವರ ಸಾವಿಗೆ ಬ್ರಿಟೀಷರೇ ಕಾರಣ. ಹೇಗೆ ನಿಮ್ಮ ಪ್ರಕಾರ ಜರ್ಮನರಿಗೆ ಇಂಗ್ಲೆಂಡ್ ದೇಶವನ್ನು ಆಕ್ರಮಿಸಿಕೊಳ್ಳುವ ಅಧಿಕಾರವಿಲ್ಲವೋ ಹಾಗೆಯೇ ಬ್ರಿಟೀಷರಿಗೂ ಸಹ ಭಾರತದ ಮೇಲೆ ಯಾವುದೇ ರೀತಿಯ ಹಕ್ಕಿಲ್ಲ. ನೀವು ಯಾವುದೇ ರೀತಿಯ ಯೋಚನೆಯನ್ನು ಮಾಡದೆ ನನಗೆ ಮರಣ ದಂಡನೆಯನ್ನೇ ವಿಧಿಸಿ. ಅದನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ. ಏಕೆಂದರೆ ನಾನು ನನ್ನ ತಾಯ್ನಾಡಿಗಾಗಿ ಪ್ರಾಣ ಬಿಡುತ್ತಿದ್ದೇನೆಂಬ ಹೆಮ್ಮೆ ನನಗಿದೆ” ಎಂದು ಹೇಳಿದರು.

    ಇವರಿಗೆ ನ್ಯಾಯಾಲಯವು ಗಲ್ಲು ಶಿಕ್ಷೆಯನ್ನು ವಿಧಿಸಿತು. ಗಲ್ಲಿಗೇರುವ ಮುನ್ನ ಧಿಂಗ್ರಾರವರು ತಾಯ್ನಾಡನ್ನು ನೆನೆಯುತ್ತಾ “ತಾಯಿ, ಬಡವ ಹಾಗೂ ಅಜ್ಞಾನಿಯಾದ ನನ್ನಂಥ ಮಗನಿಂದ ರಕ್ತವನ್ನು ಬಿಟ್ಟು ಇನ್ನೇನು ತಾನೆ ಅರ್ಪಿಸಲು ಸಾಧ್ಯ. ಇದೋ ಭಾರತಾಂಬೆ ನಿನ್ನ ಮಡಿಲಿಗೆ ನನ್ನ ಪ್ರಾಣವನ್ನು ಅರ್ಪಿಸುತ್ತಿದ್ದೇನೆ” ಎಂದು ನುಡಿದರು. ಮದನ್‍ಲಾಲ್ ಧಿಂಗ್ರಾರವರನ್ನು 1909ರ ಆಗಸ್ಟ್ 17ರಂದು ಪೆಂಟೋನ್ ವಿಲ್ಲಾ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.

    ಇಂತಹ ಮಹಾನ್ ಹೋರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.