"ನನ್ನ ಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟು ಭಾರತದಲ್ಲಿನ ಬ್ರಿಟೀಷ್ ಆಡಳಿತದ ಸಮಾಧಿಯ ಮೇಲೆ ಬೀಳುವ ಕೊನೆಯ ಉಳಿಪೆಟ್ಟುಗಳು."

-ಲಾಲಾ ಲಜಪತ್‍ ರಾಯ್



    ಲಾಲಾ ಲಜಪತ್‍ರಾಯ್‍ರವರ ಜನನ 1865ರ ಜನವರಿ 28 ರಂದು ಪಂಜಾಬಿನ ಫರೋಜ್ಪುರ ಜಿಲ್ಲೆಯ ಧುಡಿಕೆ ಎಂಬ ಹಳ್ಳಿಯಲ್ಲಾಯಿತು. ಇವರ ತಂದೆ ಮುಂಶಿ ರಾಧಾಕೃಷ್ಣ ಆಜಾದ್ ಮತ್ತು ತಾಯಿ ಗುಲಾಬ್ ದೇವಿ. ಲಾಲಾ ಲಜಪತ್‍ರಾಯ್‍ರವರಿಗೆ ಚಿಕ್ಕಂದಿನಿಂದಲೇ ದೇಶಾಭಿಮಾನದ ಪಾಠವು ಅವರ ತಾಯಿಯಿಂದ ದೊರೆತರೆ, ಪ್ರಾಥಮಿಕ ಶಿಕ್ಷಣವು ಸರ್ಕಾರಿ ಉನ್ನತ ಪ್ರೌಢಶಾಲೆಯಲ್ಲಾಯಿತು. ನಂತರ 1880ರಲ್ಲಿ ಲಾಹೋರಿನ ಸರ್ಕಾರಿ ಕಾಲೇಜಿಗೆ ಸೇರಿ ಕಾನೂನು ವ್ಯಾಸಂಗ ಮಾಡಿದರು. ಅಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಹನ್ಸರಾಜ್ ಮತ್ತು ಪಂಡಿತ್ ಗುರುದತ್‍ರವರೊಂದಿಗೆ ಸ್ನೇಹ ಬೆಳೆದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

    ದಯಾನಂದ ಸರಸ್ವತಿಯವರ ಹಿಂದೂ ಸುಧಾರಣಾ ಚಳುವಳಿಯಿಂದ ಪ್ರೇರೇಪಿತರಾದ ಲಾಲಾ ಲಜಪತ್‍ರಾಯ್‍ರವರು ಆರ್ಯ ಸಮಾಜದ ಲಾಹೋರ್ ಪ್ರಾಂತ್ಯದ ಸದಸ್ಯರಾಗಿ ಆರ್ಯ ಪ್ರಣಾಳಿಕೆಯ ಸಂಸ್ಥಾಪಕರು ಹಾಗೂ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಬಾಲ್ಯದಿಂದಲೂ ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂದು ಬಯಸಿದ್ದ ಲಾಲಾ ಲಜಪತ್‍ರಾಯ್‍ರವರು ಬ್ರಿಟೀಷರ ಆಡಳಿತದಿಂದ ಭಾರತವನ್ನು ಮುಕ್ತಗೊಳಿಸುವ ಪಣತೊಟ್ಟು 1888 ಹಾಗೂ 1889ರಲ್ಲಿ ಕಾಂಗ್ರೆಸಿನ ಪ್ರತಿನಿಧಿಯಾಗಿ ಹಲವು ಸಭೆಗಳಲ್ಲಿ ಭಾಗವಹಿಸಿದರು.

    ಓದಿನಲ್ಲಿ ಹೆಚ್ಚಿನ ಆಸಕ್ತಿ ಇದ್ದ ಲಾಲಾ ಲಜಪತ್‍ರಾಯ್‍ರವರಿಗೆ ತಾವು ಓದಿದ ಪುಸ್ತಕಗಳು ಅವರ ಮೇಲೆ ಬಹಳವಾಗಿ ಪ್ರಭಾವ ಬೀರಿದವು. ಪ್ರಮುಖವಾಗಿ ಇಟಾಲಿಯನ್ ಕ್ರಾಂತಿಕಾರಿ ಗ್ಯುಸೆಪ್ಪಿ ಮುಜಿನಿರವರ ದೇಶಭಕ್ತಿಯಿಂದ ಪ್ರಭಾವಿತರಾದ ಲಾಲಾ ಲಜಪತ್‍ರಾಯ್‍ರವರು ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಕ್ರಾಂತಿಕಾರಿ ಮಾರ್ಗವನ್ನು ಹಿಡಿದರು. ಮುಂದೆ ಪಶ್ಚಿಮ ಬಂಗಾಳದ ಅರಬಿಂದೋ ಘೋಷ್, ಬಿಪಿನ್ ಚಂದ್ರಪಾಲ್ ಹಾಗೂ ಮಹಾರಾಷ್ಟ್ರದ ಬಾಲಗಂಗಾಧರ ತಿಲಕರ ಜೊತೆಗೂಡಿ ಕಾಂಗ್ರೆಸಿನ ನಾಯಕರ ಹಲವು ನಿರ್ಧಾರಗಳನ್ನು ಖಂಡಿಸಿದರು ಮತ್ತು ಪೂರ್ಣ ಸ್ವರಾಜ್ಯದ ಪ್ರಸ್ತಾವನೆಯನ್ನು ಮಂಡಿಸಿದರು.

    ವಕೀಲ ವೃತ್ತಿಯನ್ನು ತ್ಯಜಿಸಿದ ಲಾಲಾ ಲಜಪತ್‍ರಾಯ್‍ರವರು ಭಾರತವನ್ನು ಬ್ರಿಟೀಷರ ಬಂಧನದಿಂದ ಮುಕ್ತಗೊಳಿಸಲು ಹೋರಾಡಿದರು. ಬ್ರಿಟೀಷರ ದೌರ್ಜನ್ಯ ಹಾಗೂ ದಬ್ಬಾಳಿಕೆಯನ್ನು ಪ್ರಪಂಚಕ್ಕೆ ಪರಿಚಯಿಸುವ ಸಲುವಾಗಿ 1917ರಲ್ಲಿ ಅಮೇರಿಕಾಗೆ ತೆರಳಿ ಹೋಮ್ ರೂಲ್ ಲೀಗ್ ಎಂಬ ಸಂಸ್ಥೆಯನ್ನು, ಯಂಗ್ ಇಂಡಿಯಾ ಎಂಬ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು.

    1920ರಲ್ಲಿ ಅಮೇರಿಕಾದಿಂದ ಭಾರತಕ್ಕೆ ಹಿಂದಿರುಗಿದ ಲಾಲಾ ಲಜಪತ್‍ರಾಯ್‍ರವರು ಜಲಿಯನ್‍ವಾಲಾ ಬಾಗ್‍ನ ಹತ್ಯಾಕಾಂಡದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದರು. ಗಾಂಧೀಜಿಯವರು ಅಸಹಕಾರ ಚಳುವಳಿಯ ಘೋಷಣೆ ಮಾಡಿದಾಗ ಇವರ ನೇತೃತ್ವದ ತಂಡವು ಪಂಜಾಬ್ ಪ್ರಾಂತ್ಯದಲ್ಲಿ ನಡೆಸಿದ ಪ್ರತಿಭಟನೆಯು ಇಡೀ ದೇಶವೇ ಇವರತ್ತ ಮುಖಮಾಡುವಂತೆ ಮಾಡಿತು. ಚೌರಾಚೌರಿ ಹತ್ಯಾಕಾಂಡದ ನಂತರ ಅಸಹಕಾರ ಚಳುವಳಿಯನ್ನು ಹಿಂಪಡೆದ ಗಾಂಧೀಜಿಯವರ ನಿರ್ಧಾರವನ್ನು ಲಾಲಾ ಲಜಪತ್‍ರಾಯ್‍ರವರು ತೀವ್ರವಾಗಿ ಖಂಡಿಸಿದರು ಮತ್ತು ಕಾಂಗ್ರೆಸ್ ಸ್ವತಂತ್ರ ಪಾರ್ಟಿಯನ್ನು ಕಟ್ಟಲು ಸಹ ಮುಂದಾದರು.

    1928ರ ಅಕ್ಟೋಬರ್ 30ರಂದು ಭಾರತದಲ್ಲಿನ ಬ್ರಿಟೀಷ್ ಕಾನೂನು ಸುಧಾರಣೆಗಾಗಿ ರಚಿತವಾದ ಸೈಮನ್ ಕಮಿಷನ್ ಲಾಹೋರಿಗೆ ಬಂದಾಗ ಲಾಲಾ ಲಜಪತ್‍ರಾಯ್‍ರವರ ನೇತೃತ್ವದ ತಂಡವು ಕಪ್ಪು ಬಟ್ಟೆಗಳನ್ನು ಪ್ರದರ್ಶಿಸಿ ಶಾಂತಿಯುತವಾಗಿ ಪ್ರತಿಭಟಿಸಿದರು. ಬ್ರಿಟೀಷ್ ಪೊಲೀಸ್ ಆಯುಕ್ತರಾಗಿದ್ದ ಜೇಮ್ಸ್ ಸ್ಕಾಟ್ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡುವಂತೆ ಆದೇಶ ಹೊರಡಿಸಿದರು. ಪೊಲೀಸರು ಲಾಲಾ ಲಜಪತ್‍ರಾಯ್‍ರವರನ್ನು ಪ್ರಮುಖ ಗುರಿಯನ್ನಾಗಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಮನ ಬಂದಂತೆ ಲಾಠಿಯನ್ನು ಬೀಸಿದರು. ಇದರಿಂದ ಲಾಲಾ ಲಜಪತ್‍ರಾಯ್‍ರವರಿಗೆ ತೀವ್ರ ಗಾಯಗಳಾದವು. ಆಗ ಅವರು “ನನ್ನ ಮೇಲೆ ಬಿದ್ದ ಪ್ರತಿಯೊಂದು ಲಾಠಿ ಏಟು ಭಾರತದಲ್ಲಿನ ಬ್ರಿಟೀಷ್ ಆಡಳಿತದ ಸಮಾಧಿಯ ಕೊನೆಯ ಉಳಿಪೆಟ್ಟುಗಳು” ಎಂದು ಉದ್ಗರಿಸಿದರು. ತೀವ್ರ ಗಾಯಗಳಿಂದ ಬಳಲುತ್ತಿದ್ದ ಲಾಲಾ ಲಜಪತ್‍ರಾಯ್‍ರವರು 1928ರ ನವೆಂಬರ್ 17ರಂದು ಹೃದಯಾಘಾತದಿಂದ ತಾಯಿ ಭಾರತಾಂಬೆಯ ಮಡಿಲಿಗೆ ತಮ್ಮ ಪ್ರಾಣವನ್ನು ಸಮರ್ಪಿಸಿದರು.

    ಇಂತಹ ಮಹಾನ್ ಹೋರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.