“ನನ್ನ ಗುರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವುದು, ಅದಕ್ಕಾಗಿ ಎಷ್ಟು ಬಾರಿಯಾದರು ಹುಟ್ಟಲು ಮತ್ತು ಸಾಯಲು ನಾನು ಸಿದ್ಧ. ಭಾರತ ಮಾತೆಯ ಸೇವೆಯೊಂದೇ ನನ್ನ ಆದ್ಯ ಕರ್ತವ್ಯ.”

-ಖುದಿರಾಮ್ ಬೋಸ್



     ಖುದಿರಾಮ್ ಬೋಸ್‍ರ ಜನನ 1889ರ ಡಿಸೆಂಬರ್ 3ರಂದು ಬಂಗಾಳ ರಾಜ್ಯದ ಮೇಧಿನಿಪುರವೆಂಬ ಗ್ರಾಮದ ಬಹುವನಿ ಎಂಬ ಹಳ್ಳಿಯಲ್ಲಾಯಿತು. ಇವರ ತಂದೆ ತ್ರೈಲೋಕನಾಥ್ ಬೋಸ್ ಹಾಗೂ ತಾಯಿ ಲಕ್ಷ್ಮಿಪ್ರಿಯಾ ದೇವಿ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಬೋಸ್‍ರವರು ತಮ್ಮ ಅಕ್ಕ ಅನುರೂಪಾದೇವಿಯ ಆಶ್ರಯ ಪಡೆದರು. ಪ್ರಾಥಮಿಕ ವಿದ್ಯಾಭ್ಯಾಸಕ್ಕಾಗಿ ತಮಲೋಕೆಂಬ ಗ್ರಾಮದ ಹಾಮಿಲ್ಟನ್ ಶಾಲೆಗೆ ಇವರನ್ನು ಸೇರಿಸಲಾಯಿತು. ಪತ್ತೇದಾರಿ ಕಾದಂಬರಿಗಳನ್ನು ಓದುವುದು ಹಾಗೂ ಕೊಳಲು ನುಡಿಸುವುದು ಇವರ ಹವ್ಯಾಸವಾಗಿತ್ತು. ಬಾಲ್ಯದಲ್ಲೇ ಸ್ವಾತಂತ್ರ್ಯಸಂಗ್ರಾಮದಲ್ಲಿ ಆಸಕ್ತಿಯಿದ್ದ ಖುದಿರಾಮ್ ಬೋಸ್‍ರವರು ಹೋರಾಟಗಾರರಾದ ಸತ್ಯೇಂದ್ರನಾಥ್ ಮತ್ತು ಜ್ಞಾನೇಂದ್ರನಾಥ್ ಬೋಸ್‍ರವರ ಜೊತೆಗೂಡಿ ಗುಪ್ತವಾಗಿ ಬ್ರಿಟೀಷರ ದಬ್ಬಾಳಿಕೆ ವಿರುದ್ಧಹೋರಾಟದಲ್ಲಿ ಭಾಗಿಯಾದರು.

    1906ರಲ್ಲಿನಡೆದ ಮೇಧಿನಿಪುರದ ಪ್ರದರ್ಶನವೊಂದರಲ್ಲಿ ಬೋಸ್‍ರವರು “ವಂದೇ ಮಾತರಂ” ಎಂಬ ಹಣೆಪಟ್ಟಿ ಹೊತ್ತುಬ್ರಿಟೀಷರ ವಿರುದ್ಧ ಹೋರಾಟದ ರೂಪುರೇಷೆಯ ಕರಪತ್ರಗಳನ್ನು ಹಂಚುತ್ತಿದ್ದರು. ಇದನ್ನು ಅರಿತ ಪೋಲೀಸರು ಇವರನ್ನು ತಡೆಯಲು ಬಂದಾಗ ಮುಷ್ಠಿಯಿಂದ ಅವರ ಮೂಗಿಗೆ ಬಲವಾಗಿ ಹೊಡೆದು, “ನನ್ನನ್ನು ಹಿಡಿಯಲು ನಿಮ್ಮಿಂದ ಸಾಧ್ಯವಿಲ್ಲ ಎಚ್ಚರವಿರಲಿ, ನನ್ನನ್ನು ಹಿಡಿಯಬೇಕಾದರೆ ಅರೆಸ್ಟ್ ವಾರೆಂಟ್ ತೆಗೆದುಕೊಂಡು ಬನ್ನಿ” ಎಂದು ಕೂಗುತ್ತಾ ಓಡಿದರು. ಕೆಲವು ದಿನಗಳ ನಂತರ ಇವರನ್ನು ಬಂಧಿಸಲಾಯಿತು. ಆದರೆ ಇನ್ನು ಎಳೆಯ ವಯಸ್ಸಿನ ಹುಡುಗನೆಂಬ ಅನುಕಂಪದ ಮೇಲೆ ಇವರನ್ನು ಬಿಡುಗಡೆ ಮಾಡಲಾಯಿತು. ಬಹುಶಃ ಇದು ಇವರ ವಿಚಾರದಲ್ಲಿ ಬ್ರಿಟೀಷರು ಮಾಡಿದ ಮಹಾ ತಪ್ಪಿರಬಹುದು. ಏಕೆಂದರೆ ಬಿಡುಗಡೆಯಾದ ತಕ್ಷಣ ಇವರ ಹೋರಾಟ ತೀವ್ರ ಸ್ವರೂಪ ಪಡೆದು ತಮ್ಮ ಹದಿನಾರನೇ ವಯಸ್ಸಿನಲ್ಲೇ ಸರ್ಕಾರಿ ಕಛೇರಿಗಳು ಹಾಗೂ ಪೋಲೀಸ್ ಠಾಣೆಗಳ ಮೇಲೆಬಾಂಬುಗಳನ್ನು ಹಾಕಲು ಪ್ರಾರಂಭಿಸಿದರು.

    ಬೋಸ್ ಮತ್ತು ಅವರ ಸ್ನೇಹಿತ ಪ್ರಫುಲ್ಲಾ ಚಾಕಿ ಮುಜಾಫರ್ ಪುರದಲ್ಲಿರುವ ಯೂರೋಪಿಯನ್ ಕ್ಲಬ್ ಬಳಿ ಕೋಲ್ಕತ್ತಾದ ಅತ್ಯಂತ ಕ್ರೂರಿಯಾದ ಮ್ಯಾಜಿಸ್ಟ್ರೇಟ್ ಕಿಂಗ್ಸ್‍ಫೋರ್ಡ್ ಎಂಬುವನನ್ನು ಕೊಲ್ಲಲು ಸಿದ್ದರಾದರು. ಬೋಸ್‍ರವರು ಈ ಕಾರ್ಯಾಚರಣೆಗಾಗಿ ತಮ್ಮ ಹೆಸರನ್ನು ‘ಹರೇನ್ ಸರ್ಕಾರ್’ ಎಂದು ಬದಲಿಸಿ ಕಿಂಗ್ಸ್‍ಫೋರ್ಡ್‍ನ ಚಲನವಲನಗಳನ್ನು ಅತ್ಯಂತ ನಿಕಟವಾಗಿ ಗಮನಿಸಿದರು. 1908ರ ಏಪ್ರಿಲ್ 30ರಂದು ಖುದಿರಾಮ್ ಬೋಸ್ ಮತ್ತು ಅವರ ಸ್ನೇಹಿತ ಸರಿಯಾದ ಸಮಯವನ್ನು ಕಾದಿದ್ದು ಕಿಂಗ್ಸ್‍ಫೋರ್ಡ್‍ನ ಅರಮನೆಯಿಂದ ಹೊರಟ ಸಾರೋಟಿಗೆ ಬಾಂಬ್ ಎಸೆದು ವಂದೇ ಮಾತರಂ ಎಂದು ಕೂಗುತ್ತಾ ಪರಾರಿಯಾದರು. ಆದರೆ ಆ ಸಾರೋಟ್‍ನಲ್ಲಿ ಕಿಂಗ್ಸ್‍ಫೋರ್ಡ್ ಬದಲು ಆತನ ಅತಿಥಿಗಳು ಇದ್ದಿದ್ದರಿಂದ ಕಿಂಗ್ಸ್‍ಫೋರ್ಡ್ ಬದುಕುಳಿದನು.

     ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಖುದಿರಾಮ್ ಬೋಸ್ ಮತ್ತು ಪ್ರಫುಲ್ಲಾ ಚಾಕಿರವರನ್ನು ಜೀವಂತವಾಗಿ ಹಿಡಿದು ಕೊಟ್ಟವರಿಗೆ ಸಾವಿರ ರೂಪಾಯಿ ಬಹುಮಾನವನ್ನು ನೀಡುವುದಾಗಿ ಬ್ರಿಟೀಷ್ ಸರ್ಕಾರವು ಘೋಷಿಸಿತು. ಪ್ರಕರಣ ನಡೆದ ಸ್ಥಳದಿಂದ ತಪ್ಪಿಸಿಕೊಂಡ ಬೋಸ್‍ರವರು ಸರಿಸುಮಾರು 20 ಕಿ.ಮೀ. ದೂರದಲ್ಲಿದ್ದ ರೈಲು ನಿಲ್ದಾಣವನ್ನು ತಲುಪಿದರು. ಓಡಿ ದಣಿವಾದ ಕಾರಣ ಚಹಾ ಕುಡಿಯುತ್ತಿದ್ದ ವೇಳೆ ಇವರ ಧೂಳಾದ ಬಟ್ಟೆ ಮತ್ತು ಕಾಲುಗಳನ್ನು ಗಮನಿಸಿದ ಇಬ್ಬರು ಪೋಲೀಸರು ಇವರನ್ನು ಶಂಕಿಸಿ ವಿಚಾರಿಸಿದರು. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪಿಸ್ತೂಲೊಂದು ಕೆಳಗೆ ಬಿದ್ದ ಕಾರಣ ಇವರೇ ಖುದಿರಾಮ್ ಬೋಸ್‍ರೆಂದು ಖಚಿತ ಪಡಿಸಿಕೊಂಡು ಬಂಧಿಸಿದರು. ತನ್ನ ಸ್ನೇಹಿತನಾದ ಪ್ರಫುಲ್ಲಾ ಚಾಕಿಯ ಮರಣದ ಸುದ್ದಿಯನ್ನು ಅರಿಯದ ಬೋಸ್‍ರವರು ಅವನನ್ನು ಉಳಿಸಲು ಪ್ರಕರಣದ ಎಲ್ಲಾ ಆರೋಪಗಳನ್ನು ತಮ್ಮ ಮೇಲೆ ಹಾಕಿಕೊಂಡರು. ಮೇ 21ರಂದು ಆರಂಭವಾದ ಕೋರ್ಟಿನ ಕಲಾಪಗಳು ಅಂತಿಮವಾಗಿ ಜಡ್ಜ್ ಮಿ.ಕಾನ್ರ್ಡಾಫ್‍ರವರನ್ನು ಒಳಗೊಂಡ ತ್ರಿಭಾಗೀಯ ಪೀಠ ಜೂನ್ 13ರಂದು ಕಿಂಗ್ಸ್‍ಫೋರ್ಡ್‍ನ ಅತಿಥಿಗಳನ್ನು ಕೊಂದ ಆರೋಪದ ಮೇಲೆ ಬೋಸ್‍ರವರಿಗೆ ಗಲ್ಲು ಶಿಕ್ಷೆ ವಿಧಿಸಿತು. ಇವರ ಈ ಒಂದು ಸಾಹಸ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಯುಗವೆಂದೇ ಪ್ರಸಿದ್ಧವಾಯಿತು. ಏಕೆಂದರೆ ಇಲ್ಲಿಂದ ಮುಂದೆ ಭಾರತದಲ್ಲಿ ಕ್ರಾಂತಿಕಾರಿ ಚಟುವಟಿಕೆಗಳು ತೀವ್ರ ಸ್ವರೂಪ ಪಡೆದವು. ಇವರ ವಿರುದ್ಧ ತೀರ್ಪು ಹೊರಬಂದಂತೆ ಎಲ್ಲೆಡೆ ತೀರ್ಪಿನ ವಿರುದ್ಧ ವ್ಯಾಪಕ ಹೋರಾಟಗಳು ಹಾಗೂ ಬ್ರಿಟೀಷ್ ಅಧಿಕಾರಿಗಳ ಮೇಲೆ ದಾಳಿಗಳೂ ಕೂಡ ನಡೆದವು.

     ಕಾರಾಗೃಹದಲ್ಲಿ ಬಂಧಿತರಾದ ಬೋಸ್‍ರನ್ನು ಒಬ್ಬ ಹಿರಿಯ ವ್ಯಕ್ತಿಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಗಲ್ಲಿಗೇರಿಸುವ ಹಿಂದಿನ ದಿನ ಆತನು ಬೋಸ್‍ರವರಿಗೆ ತಿನ್ನಲು ಮಾವಿನ ಹಣ್ಣೊಂದನ್ನು ಕೊಟ್ಟಿದ್ದನು, ಗಲ್ಲು ಶಿಕ್ಷೆಯ ದಿನದಂದು ಇವರನ್ನು ಭೇಟಿಯಾಗಲು ಆತ ಬಂದಾಗ ದೂರದಿಂದ ಆ ಹಣ್ಣು ಹಾಗೆಯೇ ಇದ್ದಿದ್ದನ್ನು ನೋಡಿ ಅದನ್ನು ತೆಗೆಯಲು ಹೋದಾಗ ಬೋಸ್‍ರವರು ಆತನನ್ನು ಕುರಿತು, “ಕಾಕಾ ಸಾವು ಸಮೀಪಿಸಿದೆ ಅಂತ ಬೇಸರದಿಂದ ಅಂತಹ ಸಿಹಿಯಾದ ಹಣ್ಣನ್ನು ತಿನ್ನದೆ ಇರುವುದು ಹೇಗೆ? ಹಣ್ಣು ಬಹಳ ಚೆನ್ನಾಗಿತ್ತು” ಎಂದು ನಗುನಗುತ್ತಲೇ ಮುನ್ನಡೆದರು. ಗಲ್ಲಿಗೆ ಹಾಕುವ ಮುನ್ನ ಕೊನೆಯ ಆಸೆ ಏನೆಂಬುದನ್ನು ಕೇಳಿದಾಗ ಬೋಸ್‍ರವರು ನನಗೆ ಕೋರ್ಟಿನಲ್ಲಿ ಅರ್ಧ ಗಂಟೆ ಹೆಚ್ಚು ಸಮಯ ಸಿಕ್ಕಿದ್ದರೆ ಜಡ್ಜ್‍ಗೂ ಸಹ ಬಾಂಬ್ ತಯಾರಿಸುವುದನ್ನು ಹೇಳಿಕೊಡುತ್ತಿದ್ದೆ ಎಂದು ನಿರ್ಭಯವಾಗಿ ನುಡಿದರು. ಅತ್ಯಂತ ಪ್ರಸಿದ್ಧವಾದ ಬ್ರಿಟೀಷ್ ಪತ್ರಿಕೆಯೊಂದು ಬೋಸ್‍ರವರ ಮರಣದ ಬಗ್ಗೆ ಹೀಗೆ ಬರೆದಿತ್ತು “ಖುದಿರಾಮ್ ಬೋಸ್‍ರನ್ನು ಇಂದು ಮುಂಜಾನೆ ಆರು ಗಂಟೆಗೆ ಗಲ್ಲಿಗೇರಿಸಲಾಯಿತು. ಆದರೆ ಆ ಸಮಯದಲ್ಲೂ ನಗುನಗುತ್ತಾ ಮುನ್ನಡೆದರು. ಅವರ ಕಣ್ಣುಗಳಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ತೃಪ್ತಿ ಹಾಗೂ ಅವರ ಮುಖದಲ್ಲಿ ಅಪರೂಪ ಸಾಧನೆಯ ಮಂದಹಾಸವಿತ್ತು”. ಕೊನೆಗೆ ಆಗಸ್ಟ್ 11ರಂದು 19ರ ಹರೆಯದ ಖುದಿರಾಮ್ ಬೋಸ್‍ರವರನ್ನು ಗಲ್ಲಿಗೇರಿಸಲಾಯಿತು.

     ಇಂತಹ ಮಹಾನ್ ಹೊರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.