"ಈ ನನ್ನ ರಕ್ತದಲ್ಲಿ ಕ್ರಾಂತಿಕಾರಿಯ ಕಿಚ್ಚು ಕಾಣಿಸುತ್ತಿದೆಯೇ? ಈಗಲಾದರೂ ಬ್ರಿಟೀಷ್ ಅಧಿಕಾರಿ ಕಲೆಕ್ಟರ್ ಜಾಕ್ಸನ್ ನ ಹತ್ಯೆ ಮಾಡಲು ಅವಕಾಶ ಕೊಡಿ"
-ಅನಂತ ಲಕ್ಷ್ಮಣ ಕಾನ್ಹೇರೆ
ಎಂದು ಉಚ್ಛ ಕಂಠದಿಂದ ಉದ್ಗರಿಸಿದ 19ರ ಹರೆಯದ ಯುವ ಸ್ವಾಂತಂತ್ರ್ಯ ಹೋರಾಟಗಾರ ಅನಂತ ಲಕ್ಷ್ಮಣ ಕಾನ್ಹೇರೆಯವರು ಅದೆಷ್ಟೋ ಯುವ ಸ್ವಾಂತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆಯಾಗಿದ್ದರು.
ಕಾನ್ಹೇರೆಯವರ ಜನನ 1891ರಲ್ಲಿ ಮಧ್ಯಪ್ರದೇಶದ ಇಂಧೋರಿನ ರತ್ನಗಿರಿ ಎಂಬ ಜಿಲ್ಲೆಯಲ್ಲಾಯಿತು. ಇವರ ಪ್ರಾಥಮಿಕ ಶಿಕ್ಷಣ ನಿಜಾಮಬಾದಿನಲ್ಲಾಯಿತು, ನಂತರ ಆಂಗ್ಲ ಶಿಕ್ಷಣವನ್ನು ಔರಂಗಾಬಾದಿನಲ್ಲಿ ಪಡೆದರು. ಇದೇ ಸಮಯದಲ್ಲಿ ಅನೇಕ ಕ್ರಾಂತಿಕಾರಿಗಳೊಂದಿಗೆ ಗುಪ್ತವಾಗಿ ಒಡನಾಟ ಬೆಳೆಸಿದ ಕಾನ್ಹೇರೆಯವರು ಸಾವರ್‍ಕರ್ ಸಹೋದರರ ಅಭಿನವ ಭಾರತ ಸೊಸೈಟಿಗೆ ಸೇರಿ ತಾಯ್ನಾಡಿಗಾಗಿ ಏನಾದರು ಮಾಡಬೇಕೆಂದು ಸದಾ ಹಂಬಲಿಸುತ್ತಿದ್ದರು.
ಇದೇ ಸಮಯದಲ್ಲಿ ನಾಸಿಕ್‍ನ ಕಲೆಕ್ಟರ್ ಜಾಕ್ಸನ್‍ನ ಅಟ್ಟಹಾಸ ಮಿತಿ ಮೀರಿತ್ತು, ಅವನ ದುಷ್ಕೃತ್ಯವನ್ನು ತಡೆಯಲು ಹಿರಿಯ ಕ್ರಾಂತಿಕಾರಿಗಳು ದಾರಿಯನ್ನು ಹುಡುಕುತ್ತಿದ್ದರು. ಜಾಕ್ಸನ್ ಉನ್ನತ ಹುದ್ದೆಗಾಗಿ ಮುಂಬೈಗೆ ವರ್ಗಾವಣೆಯಾಗುತ್ತಿರುವ ಸುದ್ಧಿಯನ್ನು ಅರಿತ ಕ್ರಾಂತಿಕಾರಿಗಳು ಜಾಕ್ಸನ್‍ನನ್ನು ಬೀಳ್ಕೊಡುಗೆ ಸಮಾರಂಭದಲ್ಲೇ ಹತ್ಯೆ ಮಾಡಲು ಸಭೆಯನ್ನು ಕರೆದರು. ಆದರೆ ಆ ಕೆಲಸ ಮಾಡುವುದಾದರು ಯಾರು ಎಂಬ ಗೊಂದಲದಲ್ಲಿದ್ದಾಗ ಅನಂತ ಲಕ್ಷ್ಮಣ ಕಾನ್ಹೇರೆಯು “ನಾನು ಕಲೆಕ್ಟರ್ ಜಾಕ್ಸನ್‍ನ ಹತ್ಯೆ ಮಾಡುತ್ತೇನೆ” ಎಂದು ಕೂಗುತ್ತಾ ತನ್ನ ಎಳೆ ವಯಸ್ಸನ್ನೂ ಲೆಕ್ಕಿಸದೆ ಎದ್ದು ನಿಂತರು. ಆಗ ಅಲ್ಲಿದ್ದ ಕ್ರಾಂತಿಕಾರಿಯೊಬ್ಬರು ನೀನಿನ್ನೂ ಚಿಕ್ಕ ಹುಡುಗ ನಿನ್ನ ರಕ್ತದಲ್ಲಿ ಇನ್ನು ಅಷ್ಟು ಸಾಮರ್ಥ್ಯವಿಲ್ಲಾ ಎಂದು ಅವಹೇಳನ ಮಾಡಿದರು.
ಇದರಿಂದ ಬೇಸರಗೊಂಡ ಕಾನ್ಹೇರೆಯವರು ತನ್ನಲ್ಲಿರುವ ಸಾಮರ್ಥ್ಯವನ್ನು ಸಾಕಾರಗೊಳಿಸುವ ಸಲುವಾಗಿ ಕೋಣೆಯಲ್ಲಿ ಬೆಳಗ್ಗಿನಿಂದ ಉರಿಯತ್ತಿದ್ದ ಲಾಂದ್ರಾ ದೀಪದ ಗಾಜನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದರು, ಅಂಗೈನಿಂದ ಬಂದ ರಕ್ತವು ಸೋಕಿದೊಡನೆ ಬಿಸಿಯಾಗಿದ್ದ ಗಾಜು ಒಡೆಯಿತು. ಆ ಸದ್ದಿಗೆ ಕೋಣೆಯಲ್ಲಿದ್ದ ಎಲ್ಲಾ ಹಿರಿಯ ಹೋರಾಟಗಾರರು ತಿರುಗಿ ನೋಡಲು ಕಾನ್ಹೇರೆಯವರು ತನ್ನ ಮುಕ್ತ ಕಂಠದಿಂದ ಅವರೆಲ್ಲರಿಗೂ ಕೇಳುವಂತೆ “ಈ ನನ್ನ ರಕ್ತದಲ್ಲಿ ಕ್ರಾಂತಿಕಾರಿಯ ಕಿಚ್ಚು ಕಾಣಿಸುತ್ತಿದೆಯೇ? ಈಗಲಾದರೂ ಬ್ರಿಟೀಷ್ ಅಧಿಕಾರಿ ಕಲೆಕ್ಟರ್ ಜಾಕ್ಸನ್‍ನ ಹತ್ಯೆ ಮಾಡಲು ಅವಕಾಶ ಕೊಡಿ” ಎಂದು ಉದ್ಗರಿಸಿದರು.
ಇವರಲ್ಲಿದ್ದ ಧೈರ್ಯ ಮತ್ತು ಸಾಧಿಸುವ ಛಲವನ್ನು ಅರಿತ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಪಿಸ್ತೂಲೊಂದನ್ನು ಕೊಟ್ಟು ಅದನ್ನು ಬಳಸುವ ವಿಧಾನವನ್ನು ತಿಳಿಸಿ ಕಲೆಕ್ಟರ್ ಜಾಕ್ಸನ್‍ನನ್ನು ಹತ್ಯೆ ಮಾಡಲು ಸಂಚನ್ನು ರೂಪಿಸಿದರು. ಕಾನ್ಹೇರೆಯವರ ಗುರಿ ತಪ್ಪಿದರೆ ಗೋಪಾಲ ಕರ್ವೆಯೆಂಬುವರಿಗೆ ಆ ಕೆಲಸ ಮುಗಿಸಲು ಸೂಚಿಸಲಾಗಿತ್ತು.
1909ರ ಡಿಸೆಂಬರ್ 21ರಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಕಲೆಕ್ಟರ್ ಜಾಕ್ಸನ್ ಕೂರುವ ಹಿಂದಿನ ಸಾಲಿನಲ್ಲಿ ಕಾನ್ಹೇರೆ ಹಾಗೂ ಅವರ ಹಿಂದೆ ಗೋಪಾಲ ಕರ್ವೆಯವರು ಸಿದ್ಧರಾಗಿ ಕಾದು ಕುಳಿತರು. ಕಲೆಕ್ಟರ್ ಜಾಕ್ಸನ್ ಜನರನ್ನು ಉದ್ದೇಶಿಸಿ ಮಾತನಾಡಲು ತೆರಳುವ ಸಮಯಕ್ಕೆ ಸರಿಯಾಗಿ ಕಾನ್ಹೇರೆಯವರು ಅವನ ಮುಂದೆ ನಿಂತು “ನನ್ನ ತಾಯ್ನಾಡಿನ ಜನಕ್ಕೆ ತೊಂದರೆ ಕೊಡುತ್ತಿರುವ ನೀನು ಬದುಕಿರಬಾರದು” ಎಂದು ಹೇಳುತ್ತಾ ಪಿಸ್ತೂಲಿನಿಂದ ಮೂರು ಗುಂಡುಗಳನ್ನು ಅವನ ಎದೆಗೆ ಸೇರಿಸಿದರು.
ಗುಂಡೇಟು ತಿಂದ ಕಲೆಕ್ಟರ್ ಜಾಕ್ಸನ್‍ನ ದೇಹ ಧರೆಗುರುಳಿತು. ಭ್ರಷ್ಟ ಅಧಿಕಾರಿಯನ್ನು ಕೊಂದೆ ಎಂದು ಕಾನ್ಹೇರೆಯವರಿಗೆ ಸಮಾಧಾನವಾಯಿತು. ಘಟನೆ ನಡೆದ ಸ್ಥಳದಲ್ಲೇ ಪೋಲೀಸರಿಂದ ಬಂಧಿತರಾದ ಅನಂತ ಲಕ್ಷ್ಮಣ ಕಾನ್ಹೇರೆ ಮತ್ತು ಗೋಪಾಲ ಕರ್ವೆಯವರನ್ನು ಮುಂಬೈನ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಕಲೆಕ್ಟರ್ ಜಾಕ್ಸನ್‍ನನ್ನು ಕೊಂದ ಆರೋಪದ ಮೇಲೆ ಇವರಿಬ್ಬರಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. 1910ರ ಏಪ್ರಿಲ್ 19ರಂದು ಗೋಪಾಲ ಕರ್ವೆ ಹಾಗೂ ಅನಂತ ಲಕ್ಷ್ಮಣ ಕಾನ್ಹೇರೆಯವರನ್ನು ಗಲ್ಲಿಗೇರಿಸಲಾಯಿತು.
ಇಂತಹ ಮಹಾನ್ ಹೋರಾಟಗಾರರು ನಮ್ಮ ದೇಶಕ್ಕಾಗಿ ಹೋರಾಡಿದ್ದರಿಂದಲೇ ಇಂದು ನಾವು ಸ್ವತಂತ್ರ್ಯವಾಗಿ ಬದುಕಲು ಸಾಧ್ಯವಾಗಿದೆ. ಇಂತಹ ವೀರ ಪುತ್ರರನ್ನು ಕಂಡ ಭಾರತ ಮಾತೆಯೇ ಧನ್ಯ.