ನವ ಭಾರತ ನಿರ್ಮಾಪಕರಲ್ಲಿ ತಿಲಕರೂ ಒಬ್ಬರು. “ಸ್ವರಾಜ್ಯ ನಮ್ಮಜನ್ಮಸಿದ್ಧಹಕ್ಕು” ಎಂಬ ಘೋಷಣೆಯನ್ನು ಜನರಲ್ಲಿ ಭಿತ್ತಿದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು.
ಇವರು ಮಹಾರಾಷ್ಟ್ರದ ರತ್ನಗಿರಿ ಎಂಬ ಹಳ್ಳಿಯಲ್ಲಿ ಗಂಗಾಧರ ರಾಮಚಂದ್ರ ತಿಲಕರು ಮತ್ತು ಪಾರ್ವತೀಬಾಯಿಯವರ ಸುಪುತ್ರನಾಗಿ 1859 ಜುಲೈ 23ರಂದು ಜನಿಸಿದರು. ಇವರು ಚಿಕ್ಕಂದಿನಿಂದಲೂ ಸ್ವಂತ ನಿಲುವು, ಸ್ವಂತ ಪ್ರವೃತ್ತಿಯನ್ನು ಹೊಂದಿದರ ಅಲ್ಲದೆ ಅನ್ಯಾಯದ ವಿರುದ್ಧ ಹೋರಾಡುವುದು ಇವರ ಸ್ವಭಾವವಾಗಿತ್ತು. ಇವರಿಗೆ 16ನೇ ವಯಸ್ಸಿನಲ್ಲಿ ಸತ್ಯಭಾಮ ಎಂಬ ಹುಡುಗಿಯೊಡನೆ ವಿವಾಹವಾಗಿತ್ತು. ಇವರು 1877 ರಲ್ಲಿ ಬಿ.ಎ ಮತ್ತು ಎಲ್.ಎಲ್.ಬಿ ಪದವಿಗಳನ್ನು ಪಡೆದುಕೊಂಡರು ಆ ಸಂದರ್ಭದಲ್ಲಿ ಭಾರತವು ಪರಕೀಯರ ಅಧೀನದಲ್ಲಿದ್ದು, ಭಾರತೀಯರು ತಮ್ಮತನವನ್ನು ಕಳೆದುಕೊಂಡು ಬಹಳ ಅಸಹನೀಯ ಸ್ಥಿತಿಯಲ್ಲಿದ್ದರು. ಇದರಿಂದ ಮನನೊಂದ ತಿಲಕರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು.
ಸ್ವರಾಜ್ಯದ ಕಲ್ಪನೆ ಮತ್ತು ದೇಶಾಭಿಮಾನವನ್ನು ಪ್ರತಿಯೊಂದು ಮಕ್ಕಳಲ್ಲೂ ಬಲವಾದ ಬುನಾದಿ ಹಾಕುವ ಸಲುವಾಗಿ ತನ್ನ ಸ್ನೇಹಿತರಾದ ಅಗರ್‍ಕರ್ ಮತ್ತು ಚಿಪಳೂಣಕರ್ ಜೊತೆಗೂಡಿ 1880 ರಲ್ಲಿ “ನ್ಯೂ ಇಂಗ್ಲೀಷ್ ಸ್ಕೂಲ್” ಎಂಬ ವಿದ್ಯಾ ಸಂಸ್ಥೆಯ ಜನನವಾಯಿತು. ಇದೇ ಮುಂದೆ ಬೆಳೆದು “ಡೆಕ್ಕನ್ ವಿದ್ಯಾ ಸಂಸ್ಥೆ”ಯಾಗಿ ಇಂದಿಗೂ ವಿರಾಜಿಸುತ್ತಿದೆ. ನಂತರ ಪ್ರತಿಯೊಬ್ಬ ಭಾರತಿಯನಿಗೂ ತಮ್ಮ ಗುಲಾಮಗಿರಿಯ ವಿಚಾರ ಮುಟ್ಟುವಂತೆ ಮಾಡಬೇಕೆಂದು “ಕೇಸರಿ ಮತ್ತು ಮರಾಠ” ಪತ್ರಿಕೆಯನ್ನು ಆರಂಭಿಸಿದರು. ಯುವಕರ ಮನಸೆಳೆಯುವಂತೆ ಉಗ್ರಲೇಖನಗಳನ್ನು ಬರೆದರು. ಬ್ರಿಟೀಷರ ದೌರ್ಜನ್ಯವನ್ನು ಸಾರಿದರು. ಇದರ ಫಲವಾಗಿ ಕಠಿಣ ಜೈಲುವಾಸ ಅನುಭವಿಸಿದರು.
ಬಂಗಾಳ ವಿಭಜನೆ ಸಮಯದಲ್ಲಿ ಬಾಂಬ್ ಎಸೆತದಲ್ಲಿ ನ್ಯಾಯಮೂರ್ತಿಯೊಬ್ಬರ ಕೊಲೆಯಾದಾಗ ತಿಲಕರು ಪತ್ರಿಕೆಯಲ್ಲಿ ಸರ್ಕಾರದ ವಿರುದ್ಧ ಬರೆದರು ಇದರ ಫಲ ಪುನ: ಜೈಲುವಾಸ. ಜೈಲಿನಲ್ಲಿದ್ದಾಗಲೂ “ವೇದ ಕಾಲ ನಿರ್ಣಯ” “ಗೀತಾರಹಸ್ಯ” ಪುಸ್ತಕಗಳನ್ನು ರಚಿಸಿದರು. ಬಿಡುಗಡೆಯಾದ ಬಳಿಕ “ಹೋಂ ರೂಲ್ ಲೀಗ್” ಸಂಸ್ಥೆಯನ್ನು ಸ್ಥಾಪಿಸಿ ಸ್ವರಾಜ್ಯ ನಮ್ಮ ಹಕ್ಕು ನಮ್ಮ ಮನೆಗೆ ನಾವೇ ಯಜಮಾನರು ಎಂದು ದೇಶಾದ್ಯಂತ ಪ್ರಚಾರ ಮಾಡಿದರು.
ಸುಮಾರು ಮೂರು ವರ್ಷಗಳು ಇಂಗ್ಲೆಂಡಿನಲ್ಲಿದ್ದು ಬ್ರಟೀಷರ ದಬ್ಬಾಳಿಕೆ ಬಗ್ಗೆ ಪ್ರಚಾರ ಮಾಡಿದರು. ಇದರಿಂದ ತಿಲಕರು ಲೋಕಮಾನ್ಯರೆನಿಸಿಕೊಂಡರು. ಇಂತಹ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಫಲವಾಗಿ ನಮ್ಮ ಭಾರತವು 1947 ಆಗಸ್ಟ್ 14 ರಂದು ಮಧ್ಯರಾತ್ರಿ 12:00 ಗಂಟೆಗೆ ಸ್ವಾತಂತ್ರ್ಯ ಪಡೆಯಿತು.
ಇಂತಹ ಮಹಾನ್ ಹೋರಾಟಗಾರರನ್ನು ಕಂಡ ಭಾರತಮಾತೆಯೇ ಧನ್ಯ.